ಜಿಲ್ಲೆ

ನಿಗದಿತ ದರದಲ್ಲಿ ಬೀಜ, ರಸಗೊಬ್ಬರ ವಿತರಿಸಿ

ಎಂ.ಎಸ್​.ಹಿರೇಮಠ ಬೆಳಗಾವಿ

ಬೈಲಹೊಂಗಲ: ಮುಂಗಾರು ಹಂಗಾಮು ರೈತರಿಗೆ ಆಶಾದಾಯಕವಾಗಿದ್ದು, ಕೃಷಿ ಇಲಾಖೆ ಹಾಗೂ ಕೃಷಿ ಪರಿಕರಗಳ ಮಾರಾಟಗಾರರು ರೈತರಿಗೆ ತೊಂದರೆಯಾಗದಂತೆ ನಿಗದಿತ ದರದಲ್ಲಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಪೂರೈಸಬೇಕು ಎಂದು ತಹಸೀಲ್ದಾರ್​ ಹನುಮಂತ ಶಿರಹಟ್ಟಿ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಪರಿಕರ ಮಾರಾಟಗಾರರ ಸಭೆ ಉದ್ಘಾಟಿಸಿ ಮಾತನಾಡಿ, ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಲು ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಮುತುವರ್ಜಿ ವಹಿಸಿ ಸಕಾಲದಲ್ಲಿ ಗುಣ ಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಾಡಬೇಕು. ಕೃಷಿ ಪರಿಕರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ಅವಧಿ ಮೀರಿದ ಪರಿಕರಗಳ ಮಾರಾಟ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ (ಜಾಗೃತ ದಳ) ಆರ್​.ಬಿ.ಪಾಟೀಲ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಶೈಲಾ ಮುರಗೋಡ ಮಾತನಾಡಿದರು.

ಕೃಷಿ ಅಧಿಕಾರಿಗಳಾದ ಎಂ.ಎಸ್​.ಬಿಸಗುಪ್ಪಿ, ಯಮನಪ್ಪ ಮಾದಿಗರ, ಸಹಾಯಕ ಕೃಷಿ ಅಧಿಕಾರಿಗಳಾದ ಬಿ.ಕೆ.ಜಮಾದರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರದಿಪ ಮೂಗಬಸವ ಹಾಗೂ ಕೃಷಿ ಪರಿಕರ ಮಾರಾಟಗಾರರು ಪಾಲ್ಗೊಂಡಿದ್ದರು. ಚಂದ್ರಕಾಂತ ಮರಡಿ ವಂದಿಸಿದರು.