ಜಿಲ್ಲೆ

ಶಿಕ್ಷಣ ಜಗತ್ತು ಬದಲಾಯಿಸುವ ಶಕ್ತಿಶಾಲಿ ಅಸ್ತ್ರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವತ್ತ ಕಾಯೋರ್ನ್ಮುಖರಾಗಬೇಕು ಎಂದು ಉಡುಪಿ ಕೆಸ್ತ ಧರ್ಮಪ್ರಾಂತ್ಯದ ಕಥೊಲಿಕ್​ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಿನ್ಸೆಂಟ್​ ಕ್ರಾಸ್ತಾ ಅಭಿಪ್ರಾಯಪಟ್ಟರು.

ಭಾನುವಾರ ಕಕ್ಕುಂಜೆಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್​ ಸಭಾ ಉಡುಪಿ ಪ್ರದೇಶ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.

ಶಿಕ್ಷಣವು ಆಧುನಿಕ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಸಾಧನ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಹುದ್ದೆಗಳತ್ತ ಗಮನ ಹರಿಸಬೇಕು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ತಾವು ಗಳಿಕೆ ಪ್ರಾರಂಭಿಸಿದ ಬಳಿಕ ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಸಲಹೆ ನೀಡಿದರು.

ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಗತ್ತಿನ ಅಗತ್ಯತೆಗೆ ಸಂಬಂಧಪಟ್ಟ ಶಿಕ್ಷಣ ಹೊಂದಿರದಿದ್ದರೆ ಉತ್ತಮ ಭವಿಷ್ಯ ಕಷ್ಟ. ಹೀಗಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಕಥೊಲಿಕ್​ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್​ ಕರ್ನೆಲಿಯೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೊಲಿಕ್​ ಸಭಾದ ಆಧ್ಯಾತ್ಮಿಕ ನಿರ್ದೇಶಕ ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಒಟ್ಟು 50 ವಿದ್ಯಾರ್ಥಿಗಳಿಗೆ ರೂ. 5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಥೊಲಿಕ್​ ಸಭಾ ನಿಯೋಜಿತ ಅಧ್ಯಕ್ಷ ರೊನಾಲ್ಡ್​ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್​ ರೊಡ್ರಿಗಸ್​, ಸಹಕಾರ್ಯದರ್ಶಿ ಲೂಯಿಸ್​ ಡಿಸೋಜಾ, ಮಾಜಿ ಅಧ್ಯಕ್ಷರಾದ, ಆಲ್ಫೋನ್ಸ್​ ಡಿಕೋಸ್ತಾ, ವಾಲ್ಟರ್​ ಸಿರಿಲ್​ ಪಿಂಟೊ, ಕುಂದಾಪುರ ವಲಯ ಅಧ್ಯಕ್ಷ ರೋಜಿ ಕ್ವಾಡ್ರಸ್​, ಕುಂದಾಪುರ ವಲಯ ಅಧ್ಯಕ್ಷ ವಿಲ್ಸನ್​ ಡಿ ಆಲ್ಮೇಡಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಡಾ. ಜೆರಾಲ್ಡ್​ ಪಿಂಟೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು.