ಲಿಂಗಸುಗೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಾಸಕ ಮಾನಪ್ಪ ವಜ್ಜಲ್, ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಪ್ರಮುಖರಾದ ಕೆ.ನಾಗಭೂಷಣ, ಹುಲ್ಲೇಶ ಸಾಹುಕಾರ, ಗಿರಿಮಲ್ಲನಗೌಡ ಪಾಟೀಲ್, ಸೋಮಶೇಖರ ಐದನಾಳ, ಪ್ರಾಚಾರ್ಯ ಮಲ್ಲಪ್ಪ ಸರ್ಜಾಪುರ ಇದ್ದರು. 
ಜಿಲ್ಲೆ

ನಿರ್ಬಂಧ ಸಡಿಲಿಸಿದರೆ ಎಲ್ಲರಿಗೂ ಲ್ಯಾಪ್‌ಟಾಪ್

ಶ್ರೀನಾಥ

ಲಿಂಗಸುಗೂರು: ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಲು ಬದ್ಧನಾಗಿದ್ದೇನೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು. ಕೆಕೆಆರ್‌ಡಿಬಿ ಅನುದಾನ ಬಳಕೆ ಮಾಡಲು ಕೆಲ ನಿರ್ಬಂಧಗಳಿವೆ.

ಈ ಭಾಗದ ಎಲ್ಲ ಶಾಸಕರು ನಿರ್ಬಂಧ ತೆಗೆದು ಹಾಕಲು ಕೇಳಿದ್ದೇವೆ. ಸಡಿಲಿಸಿದರೆ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್ ಒದಗಿಸಲಾಗುವುದು. ವಿದ್ಯಾರ್ಥಿಗಳ ಬೇಡಿಕೆಯಂತೆ ಕಾಲೇಜಿನಲ್ಲಿ ಆಡಿಟೋರಿಯಂ ಒದಗಿಸುವುದಾಗಿ ಭರವಸೆ ನೀಡಿದರು.

ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಅನುದಾನ ಒದಗಿಸಿದೆ. ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುವ ಉದ್ದೇಶ ನಮ್ಮದಾಗಿದೆ.

ಕಳೆದ ವರ್ಷ ಸಿಎಂಗೆ ಪತ್ರ ಬರೆದು ಶಾಲಾ-ಕಾಲೇಜುಗಳಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಒದಗಿಸುವಂತೆ ಕೇಳಿಕೊಂಡಿದ್ದೆ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲು ಹೇಳಿದ್ದರು ಎಂದು ತಿಳಿಸಿದರು.