ಜಿಲ್ಲೆ

7ನೇ ವಾರ್ಡ್‌ನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ

ಎನ್.ಆರ್.ಪುರ: ಪಟ್ಟಣದ 7ನೇ ವಾರ್ಡ್‌ನ ಅಂಬೇಡ್ಕರ್ ನಗರದಲ್ಲಿ 90 ದಲಿತ ಕುಟುಂಬದವರು ವಾಸವಾಗಿದ್ದು, ಅವರಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಅವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಡಿ.ರಾಮು ಹಾಗೂ ತಾಲೂಕು ಸಂಚಾಲಕಿ ಪವಿತ್ರ ಆಗ್ರಹಿಸಿದರು.
ಪ್ರವಾಸಿ ಮಂದಿರದಲ್ಲಿ ಡಿಎಸ್‌ಎಸ್ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನಾದಿ ಕಾಲದಿಂದಲೂ ಅಂಬೇಡ್ಕರ್ ನಗರದಲ್ಲಿ 90 ಕುಟುಂಬದವರು ವಾಸಿಸುತ್ತಿದ್ದರೆ. ಮಳೆಗಾಲದಲ್ಲಿ ವಷಕ್ಕೆ 3-4 ಮನೆಗಳು ಉರುಳಿ ಬೀಳುತ್ತಿದೆ. ಈ ಹಿಂದೆ ಗೋಡೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಕ್ಕುಪತ್ರ ಇಲ್ಲದಿರವುದರಿಂದ ಬ್ಯಾಂಕ್‌ನಿಂದ ಸಾಲ, ಪಪಂನಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಶಾಸಕರು ಗಮನ ಹರಿಸಿ ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಸೂಸಲವಾನಿ ಗ್ರಾಮದಲ್ಲಿ 100 ಕುಟುಂಬದವರಿಗೆ 2013 ರಲ್ಲಿ ತಹಸೀಲ್ದಾರ್ ಜಾತಿ ಪ್ರಮಾಣ ಪತ್ರ ವಜಾ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ. ಕುಂದು ಕೊರತೆ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಆದ್ದರಿಂದ ಅವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ತಾಲೂಕಿನ 14 ಗ್ರಾಪಂನಲ್ಲೂ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯವರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಅವರು 94 ಸಿ ಅಡಿ ಅರ್ಜಿ ಹಾಕಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಿಲ್ಲ. ಅವರಿಗೆ ಹಕ್ಕು ಪತ್ರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೋರಾಟ ರೂಪಿಸಲಾಗುವುದು ಎಂದರು.
ಮುಖಂಡರಾದ ಲತಾ, ಶ್ರೀನಾಥ, ವಿಮಲಾ, ಜಾರ್ಜ್, ಶ್ರೀಕಾಂತ್, ಸುಧಾಕರ, ಸುಜಿತ್, ಚಂದ್ರಶೇಖರ್, ರಾಗಿಣಿ, ಸಿಜು, ಪಾರ್ವತಿ, ಲಕ್ಷ್ಮಿ, ಮೀನಾಕ್ಷಿ ಮತ್ತಿತರರು ಇದ್ದರು.