ಜಿಲ್ಲೆ

ಮಕ್ಕಳ ರಕ್ಷಣೆಗೆ ಇರಲಿ ಆದ್ಯತೆ

Kopala - Raveendra V K

ಕೊಪ್ಪಳ: ಮಕ್ಕಳ ರಕ್ಷಣೆಗೆ ನಿಯೋಜನೆಗೊಂಡ ಕಾವಲು ಸಮಿತಿಗಳು ಚಿಣ್ಣರ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್​.ಬಿ.ಶೆಟ್ಟೆಪ್ಪನವರ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಕ್ಕಳ ರಕ್ಷಣಾ ಕಾವಲು ಸಮಿತಿ ಸದಸ್ಯರಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತಳಮಟ್ಟದಲ್ಲಿ ಮಹಿಳೆ, ಮಕ್ಕಳ ರಕ್ಷಣೆಗಾಗಿ ಕಣ್ಗಾವಲು ಸಮಿತಿ ರಚಿಸಲಾಗಿದೆ. ಸಮಿತಿಗಳು ಗ್ರಾಪಂಮಟ್ಟದಲ್ಲಿ ಮಹಿಳೆ ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ಶೋಷಣೆ, ಕಿರುಕುಳ, ಕೌಟುಂಬಿಕ ಹಿಂಸೆ ತಡೆಗೆ ಶ್ರಮಿಸಬೇಕು. ಮಹಿಳೆ, ಮಕ್ಕಳಿಗೆ ಸೂಕ್ತ ರಕ್ಷಣೆ, ಕಾನೂನು ಅರಿವು ಮೂಡಿಸಬೇಕು. ನಾವೆಲ್ಲರೂ ಸೇರಿ ಅನಿಷ್ಠ ಪದ್ಧತಿಗಳನ್ನು ನಿಮೂರ್ಲನೆ ಮಾಡೋಣ. ಇಲಾಖೆ ಸದಾ ನಿಮ್ಮೊಂದಿಗೆ ಇರಲಿದೆ. ಗ್ರಾಮ ಮಟ್ಟದಲ್ಲಿ ಕಾನೂನು ಬಾಹಿರ ಕೃತ್ಯ, ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಸಹಾಯಕ್ಕೆ ಧಾವಿಸಿ. ಮೇಲಧಿಕಾರಿಗಳಿಗೆ ಮಾಹಿತಿ ನೀಡಿ. ಮಕ್ಕಳ ರಕ್ಷಣೆಗೆ ಕೈ ಜೋಡಿಸಿ. ತರಬೇತಿಯಲ್ಲಿ ತಿಳಿಸುವ ಅಂಶಗಳನ್ನು ಮನದಟ್ಟು ಮಾಡಿಕೊಂಡು ಜಾರಿಗೆ ಶ್ರಮಿಸುವಂತೆ ಕರೆ ನೀಡಿದರು.

ಕೆಎಚ್​ಪಿಟಿ ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮತಿ ತರಬೇತಿ ಮಹತ್ವ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಮತ್ತು ಉಮಾದೇವಿ ತರಬೇತಿ ನೀಡಿದರು.

ಲೇಬಗೇರಿ, ಅಳವಂಡಿ, ಹಿರೇಬಗನಾಳ ಗ್ರಾಪಂ ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸದಸ್ಯರು ಇದ್ದರು.