ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ-&ಗೊಂಡಬಾಳ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ನಿರಪೇಕ್ಷಣಾ ಪತ್ರ ನೀಡದಂತೆ ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಗೊಂಡಬಾಳ ಗ್ರಾಪಂಗೆ ಮನವಿ ಸಲ್ಲಿಸಿದರು.
ಕಾರ್ಖಾನೆ ಆರಂಭ ಸಂಬಂಧ ಪರಿಸರ ಇಲಾಖೆ ನಡೆಸಿದ ಅಹವಾಲು ಸ್ವೀಕಾರ ಸಭೆಯಲ್ಲಿ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೂ ಸರ್ಕಾರ ಮೆ. ಯುಕೆಇಎಂ ಅಗ್ರಿ ಇನ್ಪ್ರಾ ಲಿಮಿಟೆಡ್ ಕಂಪನಿಗೆ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಿದೆ. ಎನ್ಒಸಿ ಕೋರಿ ಕಂಪನಿ ಗ್ರಾಪಂಗೆ ಅರ್ಜಿ ಸಲ್ಲಿಸಿದೆ. ಗ್ರಾಮದಿಂದ ಕೇವಲ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಖಾನೆ ಆರಂಭಿಸಲಾಗುತ್ತಿದೆ. ಇದರಿಂದ ಪರಿಸರ, ಜಮೀನು ಹಾಳಾಗಲಿದೆ. ಜನ ಜೀವನ ಅಸ್ತವ್ಯಸ್ತವಾಗಲಿದೆಯೆಂದು ಆರೋಪಿಸಿದರು.
ಕಂಪನಿಗೆ ಯಾವುದೇ ಕಾರಣಕ್ಕೂ ನಿರಪೇಕ್ಷಣಾ ಪತ್ರ ನೀಡಬಾರದು. ಮುದ್ದಾಬಳ್ಳಿಯಲ್ಲಿ ಗ್ರಾಮ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ. ಗ್ರಾಪಂ ಜನರ ಹಿತ ಕಾಯಬೇಕು. ಕಾರ್ಖಾನೆ ಆರಂಭಕ್ಕೆ ತಕರಾರು ಅರ್ಜಿ ನೀಡುತ್ತಿದ್ದು, ಅದನ್ನು ಮಾನ್ಯ ಮಾಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನಗೌಡ್ರ ಪಾಟೀಲ್, ಶರಣಗೌಡ್ರ ಪಾಟೀಲ್, ಸಂಗಣ್ಣ ನಾಗರಳ್ಳಿ, ಸುರೇಶರಡ್ಡಿ ಮಾದಿನೂರು, ಸಣ್ಣ ಹನುಮಪ್ಪ ಹುಳ್ಳಿ, ಸುರೇಂದ್ರಗೌಡ್ರ ಪಾಟೀಲ್, ರಾಜೀವ್ ರಡ್ಡಿ ಮಾದಿನೂರು, ಈರಣ್ಣ ಮಾಳೆಕೊಪ್ಪ, ಪ್ರಕಾಶ ಹಾಲವರ್ತಿ, ಗವಿಸಿದ್ದನಗೌಡ ಪಾಟೀಲ್, ಮೈಲಾರಪ್ಪ ಗೊಂಡಬಾಳ, ಗ್ರಾಪಂ ಸದಸ್ಯರಾದ ಶೇಖರಯ್ಯ ಇನಾಮದಾರ್, ನಾಗರಾಜ ಜಿ, ಯುವಕ ಗವಿಸಿದ್ದಪ್ಪ ಕುಂಬಾರ ಇತರರಿದ್ದರು.