ಜಿಲ್ಲೆ

ಕೊಪ್ಪಳದಲ್ಲಿ ವರುಣನ ಆರ್ಭಟ

 ಕೊಪ್ಪಳ: ನಗರ ಸೇರಿ ಗ್ರಾಮೀಣ ಭಾಗದಲ್ಲಿ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಮುಂಗಾರು ಬೆಳೆಗಳು ಕಟಾವು ಹಂತದಲ್ಲಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಮೆಕ್ಕೆಜೋಳ ಸೇರಿ ಇತರ ಬೆಳೆಗಳು ಕಟಾವು ಹಂತದಲ್ಲಿವೆ. ರೈತರು ತೆನೆ ಮುರಿದು ಗೂಡು ಹಾಕಿದ್ದಾರೆ. ಈ ಹಂತದಲ್ಲಿ ಅಧಿಕ ಮಳೆಯಾಗುತ್ತಿದ್ದು, ಅನ್ನದಾತರನ್ನು ಕಷ್ಟಕ್ಕೆ ದೂಡಿದೆ. ಕೆಲವರು ಮೆಕ್ಕೆಜೋಳ ರಾಶಿ ಮಾಡಿದ್ದಾರೆ. ತಡರಾತ್ರಿ ಮಳೆ ಸುರಿದಿದ್ದು ಪರದಾಡುವಂತಾಯಿತು. ಕೊಪ್ಪಳ ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರಿಂದ ಗುರುವಾರ ಬೆಳಗ್ಗೆ 7 ಗಂಟೆ ವೇಳೆಗೆ 200 ಕ್ಯೂಸೆಕ್ ನೀರು ಹಳ್ಳಕ್ಕೆ ಬಿಡಲಾಯಿತು. ಒಂದು ಗಂಟೆಯಲ್ಲಿ 800 ಕ್ಯೂಸೆಕ್ವರೆಗೆ ನೀರು ಹರಿಬಿಡಲಾಯಿತು. ಮಳೆ ತಗ್ಗಿದ್ದರಿಂದ ಒಳ ಹರಿವು ಕಡಿಮೆ ಆದ ಹಿನ್ನೆಲೆಯಲ್ಲಿ ಹಳ್ಳಕ್ಕೆ ನೀರು ಬಂದ್ ಮಾಡಲಾಯಿತು.

ಜಲಾಶಯ ಭರ್ತಿಯಾಗಿದ್ದು, ಮಳೆಯಾದಲ್ಲಿ ಅಷ್ಟೂ ನೀರಿ ಹಳ್ಳಕ್ಕೆ ಬಿಡುವ ಸ್ಥಿತಿ ಇದೆ. ಇನ್ನು ಮಳೆ ಆಗುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲಾದರೂ ಹಳ್ಳಕ್ಕೆ ನೀರು ಬಿಡುವ ಸಾಧ್ಯತೆ ಇದೆ. ಹೀಗಾಗಿ ಹಳ್ಳ ವ್ಯಾಪ್ತಿಯಲ್ಲಿ ಜನ&ಜಾನುವಾರು ಓಡಾಡದಂತೆ ಜಲಾಶಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಳೆ ಮುಂದುವರಿದಲ್ಲಿ ರೈತರ ಕಟಾವು ಕಾರ್ಯಕ್ಕೆ ಸಮಸ್ಯೆ ಆಗಲಿದೆ.