ಕಾರವಾರ: ಇಲ್ಲಿನ ಜಿಪಂ ರೂಪಿಸಿದ ಕ್ಲಿನಿಕ್ ಇನ್ ಎ ಬ್ಯಾಕ್ಪ್ಯಾಕ್ಗೆ ಪ್ರತಿಷ್ಠಿತ ‘ಸ್ಕಾಚ್’ ಪ್ರಶಸ್ತಿ ಲಭಿಸಿದೆ.
ಆರೋಗ್ಯ ಸೌಲಭ್ಯ ಇಲ್ಲದ ಕುಗ್ರಾಮಗಳಲ್ಲಿ, ಪ್ರವಾಹದಂಥ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳ ಆರೋಗ್ಯ ಪರೀಕ್ಷಿಸುವ ಕಿಟ್ ಇದಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಾ.ಸಂಗೀತಾ ಭಟ್ ಈ ಕಿಟ್ ಯೋಜನೆ ರೂಪಿಸಿದ್ದರು. ಸಿಇಒ ಎಂ. ರೋಶನ್ ನೇತೃತ್ವದಲ್ಲಿ ಜಾರಿ ಮಾಡಲಾಗಿತ್ತು. 2019ರ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಕ್ಲಿನಿಕ್ ಇನ್ ಬ್ಯಾಕ್ಪ್ಯಾಕ್ ಯೋಜನೆಯನ್ನು ದೇವಳಮಕ್ಕಿ ಗ್ರಾಪಂನಿಂದ ಪ್ರಾರಂಭಿಸಲಾಗಿತ್ತು. ನಂತರ ಇದುವರೆಗೆ ಜಿಲ್ಲೆಯ 49 ತಾಯಂದಿರೂ ಸೇರಿ 545 ರೋಗಿಗಳ ಆರೋಗ್ಯ ಪರಿಶೀಲನೆ ಮಾಡಲಾಗಿದೆ. ಇತ್ತೀಚೆಗೆ ಸಂಗೀತಾ ಭಟ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಯೋಜನೆ ಹಾಗೂ ಪ್ರಶಸ್ತಿಯ ಬಗ್ಗೆ ವಿವರಿಸಿದರು. ಸ್ವಯಂ ಸೇವಾ ಸಂಸ್ಥೆಗಳ ಜತೆ ಸೇರಿ ಹಳಿಯಾಳ ಹಾಗೂ ಅಂಕೋಲಾದಲ್ಲಿ ಯೋಜನೆ ಜಾರಿಗೆ ತರುವುದಾಗಿ ತಿಳಿಸಿದರು.
ಏನಿದು ಕ್ಲಿನಿಕ್ ಇನ್ ಬ್ಯಾಕ್ ಪ್ಯಾಕ್?: ಆರೋಗ್ಯ ಸಿಬ್ಬಂದಿ ಬೆನ್ನಿಗೆ ಚೀಲವೊಂದನ್ನು ಹಾಕಿಕೊಂಡು ಹೋದಲ್ಲಿ ಅದರಲ್ಲಿ ಅಗತ್ಯ ಹಲವು ಉಪಕರಣಗಳಿದ್ದು, ಆರೋಗ್ಯ ಪರೀಕ್ಷೆ ತುರ್ತು ಚಿಕಿತ್ಸೆಗೆ ಅನುಕೂಲವಾಗಲಿದೆ. ತೂಕ, ಎತ್ತರ, ದೇಹದ ಸುತ್ತಳತೆ ಮಾಪಕಗಳು, ಅಲ್ಟ್ರಾಸಾನಿಕ್, ಕೆಂಪು ರಕ್ತದ ಕಣ ಅಳೆಯುವ, ರಕ್ತದೊತ್ತಡ ತಿಳಿಸುವ ಉಪಕರಣಗಳು, ಥರ್ವಮೀಟರ್, ಸಂಚಾರಿ ಇಸಿಜಿ ಯಂತ್ರ, ಪಲ್ಸ್ ಆಕ್ಸಿಮೀಟರ್ ಸೇರಿ 15 ಉಪಕರಣಗಳನ್ನು ಇಡಲಾಗಿದೆ. ಟ್ಯಾಬ್ಲೆಟ್ ಮೂಲಕ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ‘ಕ್ಲೌಡ್ ತಂತ್ರಾಂಶ’ದಲ್ಲಿ ಸಂಗ್ರಹಿಸಲಾಗುತ್ತದೆ.