ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಡೈರಿ, ಆಹಾರ ಮತ್ತು ಸಂಸ್ಕೃತಿಯ ವಿಶ್ಲೇಷಣಾ ಪ್ರಯೋಗಾಲಯ ಸಂಸ್ಥೆ (ಐಎಡಿಎಫ್‌ಎಸಿ) ಕಳುಹಿಸಲಾಗಿದ್ದ ವರದಿ ಬುಧವಾರ ಆಹಾರ ಮತ್ತು ಗುಣಮಟ್ಟ ಇಲಾಖೆ ಕೈಸೇರಿದೆ.
ರಾಸಾಯನಿಕಗಳು ಒಪ್ಪಿಕೊಳ್ಳುವ ಮಟ್ಟದಲ್ಲಿದ್ದು, ಅಪಾಯಕಾರಿ ಅಂಶಗಳಿಲ್ಲ. ಕಾಲರಾಕ್ಕೆ ಕಾರಣವಾಗುವ ರೋಗಾಣುಗಳಿವೆ ಎಂದು ದೃಢೀಕರಿಸಿದೆ.
ಮತ್ತೆ ಮೂವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 115 ಪುರುಷರು, 111 ಮಹಿಳೆಯರು ಒಳಗೊಂಡು ಅಸ್ವಸ್ಥರ ಸಂಖ್ಯೆ 226ಕ್ಕೆ ಏರಿಕೆಯಾಗಿದ್ದು, ಬುಧವಾರ 18 ಸೇರಿ ಈವರೆಗೂ 188 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ಸೇರಿ 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬೊಬ್ಬರೆ ಗುಣಮುಖರಾಗಿ ಮನೆಗೆ ಹಿಂದಿರುಗುತ್ತಿರುವುದು ಕಾಲನಿಯ ಜನರಲ್ಲಿದ್ದ ಆತಂಕ ದೂರ ಮಾಡುತ್ತಿದೆ.
ಕವಾಡಿಗರಹಟ್ಟಿಯ ಪ್ರಕರಣ ಸಂಬಂಧ ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಡಿಎಚ್‌ಒ ಡಾ.ಆರ್.ರಂಗನಾಥ್, ಮಕ್ಕಳ ತಜ್ಞ ಡಾ.ದೇವರಾಜ್ ಇತರರಿದ್ದರು.