ಜಿಲ್ಲೆ

ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ರಾಜ್ಯದಲ್ಲಿ ಸರ್ಕಾರ ಇದೆ ಎನ್ನುವ ಭಾವನೆಯೇ ಇಲ್ಲ. ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವ ಬದಲು, ವಿಧಾನಸಭೆ ವಿಸರ್ಜಿಸಿ ಹೊಸತಾಗಿ ಚುನಾವಣೆಗೆ ಹೋಗುವುದು ಉತ್ತಮ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ರೀತಿಯ ಆಡಳಿತ ನಿರೀಕ್ಷಿಸಿರಲಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಗಂಭೀರವಾಗಿದೆ. ಸಿದ್ದರಾಮಯ್ಯ ಅವರಿಗೆ ತಾವೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಮೇಲಿಂದ ಮೇಲಿ ಹೇಳಿಕೊಳ್ಳುವ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಶಾಸಕರಿಗೆ ಅನುದಾನ ಲಭಿಸುತ್ತಿಲ್ಲ. ಇದರಿಂದಾಗಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ನಿಂತ ನೀರಾಗಿದೆ. ಹೊಸತಾಗಿ ಶಾಸಕರಾದವರು ಕ್ಷೇತ್ರದಲ್ಲಿ ಕೆಲಸ ಮಾಡಲಾರದೇ ಪರದಾಡುತ್ತಿದ್ದಾರೆ ಎಂದರು.

ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿಯೆಂದು ಹೇಳುವ ಅಧಿಕಾರ ಯತೀಂದ್ರ ಅವರಿಗೆ ಯಾರು ಕೊಟ್ಟರು ? ಅವರೊಬ್ಬ ಎಂಎಲ್​ಸಿ ಅಷ್ಟೇ ಎಂದರು.