ಮಲೇಬೆನ್ನೂರು: ಪಟ್ಟಣದ ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಗುರುವಾರ ಅದ್ದೂರಿಯಾಗಿ ನಡೆಯಿತು.
ಮೆರವಣಿಗೆ ಮಧ್ಯಾಹ್ನ 1 ಗಂಟೆಗೆ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಭದ್ರಾ ಚಾನೆಲ್ನಲ್ಲಿ ಶಾಸ್ತ್ರೋಕ್ತವಾಗಿ ಗಣೇಶನನ್ನು ವಿಸರ್ಜಿಸಲಾಯಿತು.
ಬೆಳಗ್ಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು. ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಹಿಂದು ಗಣಪನನ್ನು ಕುಳಿಸಿ ಶೋಭಾಯಾತ್ರೆ ಮಾಡಲಾಯಿತು. ದಾರಿಯುದ್ದಕ್ಕೂ ಜೈ ಶ್ರೀರಾಮ್ ಹರಹರ ಮಹಾದೇವ, ಗಣಪತಿ ಬಪ್ಪಾ ಮೋರಯಾ ಎಂಬ ಘೊಷ ವಾಕ್ಯಗಳು ಕೇಳಿ ಬಂದವು.
ನಾಸಿಕ್ ಡೋಲು, ತಮಟೆ, ಡೋಲು ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು. ಯುವಕರು ಮತ್ತು ಮಹಿಳೆಯರು ಕಲಾ ಮೇಳದ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಪೊಲೀಸರು ಪಟ್ಟಣದ ಹೊರವಲಯದಲ್ಲಿ ನಾಕಾಬಂದಿ ನಿರ್ವಿುಸಿ ಜನರಿಗೆ ಸೂಚನೆ ನೀಡುತ್ತಿದ್ದರು.
ಮೆರಣಿಗೆಯಲ್ಲಿ ಮಾಜಿ ಶಾಸಕ ಶಿವಶಂಕರ್, ಶಾಮನೂರು ಸಮರ್ಥ, ಜಿಪಂ ಮಾಜಿ ಸದಸ್ಯ ವಾಗೀಶ ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಮುಖಂಡರಾದ ಚಂದ್ರಶೇಖರ್ ಪೂಜಾರ್, ನಂದಿಗಾವಿ ಶ್ರೀನಿವಾಸ್, ಕೆ.ಜಿ. ಪರಮೇಶಪ್ಪ, ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ವೈ. ಅಶೋಕ್, ಖಜಾಂಚಿ ಪೂಜಾರ್ ರಾಜು, ಬೆಣ್ಣಿಹಳ್ಳಿ ಸಿದ್ದೇಶ್, ಎಕ್ಕೆಗೊಂದಿ ಕರಿಯಪ್ಪ, ಕಡ್ಲೆಗೊಂದಿ ಕೇಶವ, ಬೆಳಕೇರಿ ಚಂದ್ರಣ್ಣ ಇತರರಿದ್ದರು.
ಊಟ, ನೀರು, ಮಜ್ಜಿಗೆ ಸೇವೆ ಮತ್ತು ಪ್ರಸಾದ ವಿತರಣೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಹಿಂದು ಮಹಾ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹಿಂದು ಗಣಪ ದರ್ಶನಕ್ಕೆ ಯತ್ನಾಳ್
ಶೋಭಾಯಾತ್ರೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ ವೇಳೆ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಯಿತು.
ಕುಂಬಳೂರಿನಿಂದ ಮಲೇಬೆನ್ನೂರಿನವರೆಗೆ ಯತ್ನಾಳ್ ಅಭಿಮಾನಿ ಬಳಗದವರು ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿದರು. ಬಳಿಕ ಪೊಲೀಸರ ಸರ್ಪಗಾವಲಿನಲ್ಲಿ ಹಿಂದು ಗಣೇಶನಿಗೆ ಹಾರ ಹಾಕಿ ಕೈ ಮುಗಿದರು.
ಯತ್ನಾಳ್ ಅವರು ಭಾಷಣ ಮಾಡಲು ಪೊಲೀಸರು ಮೈಕ್ ಕೊಡದೆ ನಿರ್ಬಂಧ ಹೇರಿದ್ದರಿಂದ ಹಿಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಅವರು ಆರಕ್ಷಕರ ವರ್ತನೆಯನ್ನು ಖಂಡಿಸಿದರು.
ಶಾಸಕರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಂತೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ನಂತರ ಯತ್ನಾಳ್ ಅವರನ್ನು ಪರ್ಯಾಯ ರಸ್ತೆ ಮೂಲಕ ಕರೆದುಕೊಂಡು ಹೋಗಲಾಯಿತು.