ಹುಬ್ಬಳ್ಳಿ : ಹುಬ್ಬಳ್ಳಿಯ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗೆ ಯಾವುದೇ ರೀತಿಯ ಅಡಚಣೆಯುಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಂದಿರಾ ಗಾಜಿನಮನೆ ಪಕ್ಕದ ಬಾವಿಯಲ್ಲಿ ವಿಸರ್ಜನೆಗೊಳ್ಳುವ ಮೂರ್ತಿಗಳ ಮೆರವಣಿಗೆ ಕಾರವಾರ ರಸ್ತೆ-ಗಿರಣಿಚಾಳ ಮುಖಾಂತರ ಸಂಚರಿಸಿದರೆ, ಹೊಸೂರು ಬಾವಿಯತ್ತ ಸಾಗುವ ಮೂರ್ತಿಗಳ ಮೆರವಣಿಗೆ ನೀಲಿಜಿನ್ ರಸ್ತೆಯಿಂದ ಸಂಚರಿಸುತ್ತವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾನಗರ ಪಾಲಿಕೆ, ಪೊಲೀಸ್, ಅರಣ್ಯ, ಹೆಸ್ಕಾಂ, ಎಲ್ ಆಂಡ್ ಟಿ ಹಾಗೂ ಇನ್ನಿತರ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಇರುವ ಗುಂಡಿಗಳನ್ನು ತುಂಬಬೇಕು. ಮೆರವಣಿಗೆಗೆ ಅಡ್ಡಿ ಬರುವ ಗಿಡಗಳ ಟೊಂಗಿಗಳನ್ನು ಕತ್ತರಿಸಬೇಕು. ಹೆಸ್ಕಾಂನವರು ವಿದ್ಯುತ್ ಸರಬರಾಜು ನಿರಂತರವಾಗಿರುವಂತೆ ನೋಡಿಕೊಳ್ಳಬೇಕು. ಸಂಜೆ ಹೊತ್ತಿನಲ್ಲಂತೂ ಯಾವುದೇ ಕಾರಣಕ್ಕೂ ವಿದ್ಯುತ್ ಅಡಚಣೆಯಾಗಬಾರದು ಎಂದು ಸೂಚಿಸಿದರು.
ಮೂರ್ತಿ ವಿಸರ್ಜನೆ ಮಾರ್ಗದಲ್ಲಿ ವಿದ್ಯುತ್ ಲೈನ್ ಕ್ರಾಸಿಂಗ್ ಆಗದಂತೆ ನೋಡಿಕೊಳ್ಳಬೇಕು. 20-30 ಅಡಿ ಎತ್ತರದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹೀಗಾಗಿ, ಮೆರವಣಿಗೆಗೆ ಅಡಚಣೆಯಾಗುವ ವಿದ್ಯುತ್ ಲೈನ್ಗಳನ್ನು ಸ್ಥಳಾಂತರಿಸಬೇಕು ಎಂದು ಹೇಳಿದರು.
ಸಣ್ಣ ಸಣ್ಣ ಬಾವಿಗಳನ್ನೂ ಸ್ವಚ್ಛಗೊಳಿಸಿ, ಬಾವಿಯ ಬಳಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ರಾತ್ರಿ ಸಮಯದಲ್ಲಿ ಬಿದಿ ದೀಪಗಳು ಕಡ್ಡಾಯವಾಗಿ ಇರಬೇಕು ಎಂದು ನಿರ್ದೇಶನ ನೀಡಿದರು.
ಉಪ ಮಹಾಪೌರ ಸಂತೋಷ ಚವ್ಹಾಣ ಮಾತನಾಡಿ, ಈಗಾಗಲೇ ಅವಳಿ ನಗರದ ಸಾರ್ವಜನಿಕ ಗಣೇಶ ಮೂರ್ತಿ ಮೆರವಣಿಗೆ ಮಾರ್ಗದ ಗುಂಡಿಗಳನ್ನು ತುಂಬಲಾಗಿದೆ. ಹುಬ್ಬಳ್ಳಿಯ ಹೊಸೂರು ಹಾಗೂ ಇಂದಿರಾ ಗಾಜಿನ ಮನೆ ಪಕ್ಕದ ಬಾವಿಗಳನ್ನು ಸ್ವಚ್ಛಗೊಳಿಸಿ, ನೀರು ತುಂಬಿಸಲಾಗಿದೆ. ಧಾರವಾಡದ ನುಚ್ಚಂಬ್ಲಿ ಬಾವಿಯನ್ನೂ ಸ್ವಚ್ಛಗೊಳಿಸಿ, ನೀರು ತುಂಬಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಗಣೇಶ ಮೂರ್ತಿಗಳಿಗ ಪರವಾನಿಗಾಗಿ ಸಿಂಗಲ್ ವಿಂಡೋ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.
ಎಸಿಪಿ ವೀರೇಶ ಮಾತನಾಡಿ, ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಲಾಗಿದೆ ಎಂದು ಹೇಳಿದರು.
ಉತ್ತರ ಸಂಚಾರಿ ಠಾಣೆ ಇನಸ್ಪೆಕ್ಟರ್ ಡಿಸೋಜಾ ಮಾತನಾಡಿ, ಕಳೆದ ಬಾರಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಸರಬರಾಜಿಗೆ ತಡೆಯಾಗಿತ್ತು. ಇದೇ ಸಂದರ್ಭದಲ್ಲಿ ಐದಾರು ಚೂರಿ ಇರಿತ ಪ್ರಕರಣಗಳಾಗಿದ್ದವು. ಹೀಗಾಗಿ, ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಸರಬರಾಜಿಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಹಾಪೌರರಾದ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕಾರ, ಮೀನಾಕ್ಷಿ ಒಂಟಮೂರಿ, ಬಿಜೆಪಿಯ ಈಶ್ವರಗೌಡ ಪಾಟೀಲ ಹಾಗೂ ಇತರರು ಇದ್ದರು.