ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ಜತೆಗೆ ಮನೆಗಳಲ್ಲಿ ಪೂಜೆ ಸಲ್ಲಿಸಿದ್ದವು ಸೇರಿ ಶನಿವಾರ ಹಾಗೂ ಭಾನುವಾರ ಒಟ್ಟು 3 ಲಕ್ಷಕ್ಕೂ ಹೆಚ್ಚು ಮೂರ್ತಿಗಳನ್ನು ಪಾಲಿಕೆಯ ಕಲ್ಯಾಣಿ, ತಾತ್ಕಾಲಿಕ ಟ್ಯಾಂಕ್‌ಗಳಲ್ಲಿ ವಿಸರ್ಜಿಸಲಾಗಿದೆ.
ಹಬ್ಬದ ದಿನವಾದ ಶನಿವಾರ ಒಂದೇ ದಿನ 2 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಸಾರ್ವಜನಿಕರು ತಂಡಗಳಲ್ಲಿ ಆಗಮಿಸಿ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿ ತೆರಳಿದರು. ಎಲ್ಲೂ ಅಹಿತರ ಘಟನೆಗಳು ನಡೆದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಬಿಬಿಎಂಪಿ ಗಣಪತಿ ಮೂರ್ತಿಗಳ ವಿಸರ್ಜನೆಗೆ ಎಂಟೂ ವಲಯಗಳಲ್ಲಿ 41 ಕೆರೆಗಳ ಬಳಿ ನಿರ್ಮಿಸಿರುವ ಕಲ್ಯಾಣಿಗಳನ್ನು ಸಜ್ಜುಗೊಳಿಸಿತ್ತು. ಜತೆಗೆ ಪ್ರಮುಖ ಸ್ಥಳಗಳಲ್ಲಿ 462 ತಾತ್ಕಾಲಿಕ ಮೊಬೈಲ್ ಟ್ಯಾಂಕ್‌ಗಳನ್ನು ವ್ಯವಸ್ಥೆ ಕೂಡ ಮಾಡಲಾಗಿತ್ತು. ಎಲ್ಲೂ ಕೆರೆಗೆ ನೇರವಾಗಿ ಮೂರ್ತಿಗಳನ್ನು ವಿಸರ್ಜಿಸಲು ನಿರ್ಬಂಧ ಇರುವುದರಿಂದ ನಾಗರಿಕರಿಗೆ ತೊಂದರೆ ಆಗದಂತೆ ಸಂಚಾರಿ ಟ್ಯಾಂಕ್‌ಗಳನ್ನು ಬಳಸಿಕೊಳ್ಳಲಾಯಿತು. ಈ ವ್ಯವಸ್ಥೆಯನ್ನು ಬಹಳಷ್ಟು ಜನರು ಬಳಸಿಕೊಂಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಅತಿ ಹೆಚ್ಚು ಮೂರ್ತಿಗಳು ವಿಸರ್ಜನೆಯಾಗುವ ಸ್ಥಳಗಳಾದ ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆ, ಯಡಿಯೂರು ಕೆರೆ, ಹಲಸೂರು ಕೆರೆ, ವೈಟ್‌ಫೀಲ್ಡ್ ಕೆರೆಗಳ ಬಳಿ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಆಯಾ ವಲಯಗಳ ಉಪ ಆಯುಕ್ತರ ನೇತೃತ್ವದಲ್ಲಿ ಕೆರೆಗಳ ಬಳಿ ನುರಿತ ಈಜುಗಾರರು, ಪೊಲೀಸ್/ಹೋಂ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಮೂರ್ತಿಗಳ ವಿಸರ್ಜನೆ ಆಗುವ ನಿರೀಕ್ಷೆ ಇದೆ.
ಇಂದು ಹಲವೆಡೆ ಮೆರವಣಿಗೆ:
ನಗರದಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ಪೈಕಿ ಹಲವೆಡೆ ವಿಸರ್ಜನಾ ಕಾರ್ಯಕ್ರಮ ಸೋಮವಾರ ನಡೆಯಲಿದೆ. ಮೂರು ದಿನ ಗಣಪತಿಯನ್ನು ಪೂಜಿಸಿ ನೀರಿನಲ್ಲಿ ವಿಸರ್ಜಿಸುವ ಪರಿಪಾಠ ಚಾಲ್ತಿಯಲ್ಲಿದೆ. ಹೀಗಾಗಿ ಕೆಲ ಪ್ರಮುಖ ಗಣಪತಿ ಸಂಘಗಗಳು ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆ ವಿವರ:
ವಲಯದ ಹೆಸರು ಮೂರ್ತಿಗಳ ಸಂಖ್ಯೆ
ಪೂರ್ವ 40,791
ಪಶ್ಚಿಮ 52,429
ದಕ್ಷಿಣ 84,149
ಬೊಮ್ಮನಹಳ್ಳಿ 3,915
ದಾಸರಹಳ್ಳಿ 1,719
ಮಹದೇವಪುರ 7,229
ಆರ್.ಆರ್.ನಗರ 12,680
ಯಲಹಂಕ 14.094
ಒಟ್ಟು ಮೂರ್ತಿಗಳು 2,17,006