ಜಿಲ್ಲೆ

‘ಕೈ’ ಪಾಳಯದಲ್ಲಿ ಭುಗಿಲೆದ್ದ ಭಿನ್ನಮತ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ-ಬನಹಟ್ಟಿ: ಅವಳಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಆಯ್ಕೆ ಕುರಿತು ಕಾಂಗ್ರೆಸ್‌ನಲ್ಲಿ ಮನೆಮಾಡಿದ್ದ ಅಸಮಾಧಾನ ಬನಹಟ್ಟಿಯ ಪ್ರಾಧಿಕಾರ ಕಾರ್ಯಾಲಯ ಎದುರು ಬುಧವಾರ ಸ್ಫೋಟಗೊಂಡಿದೆ.

ಅವಳಿ ನಗರದ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಪಡೆದ ದಾನಪ್ಪ ಹುಲಜತ್ತಿ ಅವರ ಪದಗ್ರಹಣಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರ ವಿರುದ್ಧ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ, ಬಹಿರಂಗವಾಗಿ ಆಕ್ರೋಶ ಹೊರ ಹಾಕಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಸಿದ್ದು ಕೊಣ್ಣೂರ ಕ್ಷೇತ್ರದ ಹೊಣೆ ಹೊತ್ತು ಪಕ್ಷ ಸಂಘಟಿಸುತ್ತಿದ್ದಾರೆ. ಹೀಗಿರುವಾಗ ಕ್ಷೇತ್ರದಲ್ಲಿನ ಸ್ಥಾನಗಳ ಹಂಚಿಕೆಯನ್ನು ಯಾರ ಗಮನಕ್ಕೂ ತರದೆ ಆಯ್ಕೆ ನಡೆಯುತ್ತಿರುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಅಧ್ಯಕ್ಷ ಶೇಖರ ಹಕ್ಕಲದಡ್ಡಿ ಮಾತನಾಡಿ, ಅಧಿಕಾರ ಯಾರಿಗೂ ಶಾಶ್ವತವಲ್ಲ. ಮುಖಂಡರನ್ನೂ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಪ್ರತ್ಯೇಕ ಭೇಟಿಮಾಡಿ ವಿವರ ನೀಡುವುದಾಗಿ ತಿಳಿಸಿದರು.

ತೇರದಾಳ ಕ್ಷೇತ್ರದ ವಕ್ತಾರ ಕಿರಣ ಕರಲಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಉಮಾಶ್ರೀ ಅವರಿಂದ ಯಾವುದೇ ಕಾರ್ಯ ಚಟುವಟಿಕೆಯಿಲ್ಲ. ಪರಾಜಿತಗೊಂಡಿರುವ ಸಿದ್ದು ಕೊಣ್ಣೂರ ಕ್ಷೇತ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿನ ಆಗು-ಹೋಗುಗಳು, ಕಾರ್ಯಕರ್ತರ ನೋವು, ನಲಿವನ್ನು ಗಮನಿಸುತ್ತಿದ್ದಾರೆ. ಆದರೆ ಮಾಜಿ ಸಚಿವೆ ಉಮಾಶ್ರೀ ಪಕ್ಷಕ್ಕಾಗಿ ದುಡಿಮೆಮಾಡದ ವ್ಯಕ್ತಿಗಳಿಗೆ ಅಧಿಕಾರ ನೀಡುತ್ತಿದ್ದಾರೆ. ಇದು ನೋವುಂಟು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಉಮಾಶ್ರೀ ಮಾತನಾಡಿ, ಪಕ್ಷದಲ್ಲಿ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಎಂದಿಗೂ ಕೈ ಬಿಡುವುದಿಲ್ಲ. ಪ್ರಾಮಾಣಿಕ ಪ್ರಯತ್ನದಿಂದ ದಾನಪ್ಪ ಹುಲಜತ್ತಿಯವರಿಗೆ ಪ್ರಾಧಿಕಾರ ಅಧ್ಯಕ್ಷ ಸ್ಥಾನ ದೊರೆತಿದೆ. ಅದರಂತೆ ಮುಂದೆಯೂ ಎಲ್ಲ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದರು.

ಪೊಲೀಸ್ ಬಂದೋಬಸ್ತ್ : ಪ್ರತಿಭಟನೆ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಪ್ರಾಧಿಕಾರ ಕಚೇರಿಯಿಂದ ಉಮಾಶ್ರೀಯವರು ಹೊರ ಬರುತ್ತಿದ್ದಂತೆ ಪ್ರತಿಭಟನಾನಿರತ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಉಮಾಶ್ರೀ ಅವರನ್ನು ಕಾರಿನಲ್ಲಿ ಹತ್ತಿಸಿ ಕಳುಹಿಸಿಕೊಟ್ಟರು.