ಜಿಲ್ಲೆ

ಅಧಿಕಾರಿಗಳ ಕಾರ್ಯವೈಖರಿಗೆ ರೈತರ ಅಸಮಾಧಾನ

ತಿ.ನರಸೀಪುರ: ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ತಹಸೀಲ್ದಾರ್ ಟಿ.ಜಿ.ಸುರೇಶ್‌ಆಚಾರ್ ಅಧ್ಯಕ್ಷತೆಯಲ್ಲಿ ರೈತರ ಕುಂದುಕೊರತೆ ಸಭೆ ನಡೆಯಿತು. ಕೃಷಿ, ನೀರಾವರಿ, ಅಬಕಾರಿ, ಪುರಸಭೆ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳ ಕಾರ್ಯವೈಖರಿಗೆ ರೈತ ಮುಖಂಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.


ತಾಲೂಕಿನ ಬನ್ನೂರು ಟೌನ್ ಮತ್ತು ತಿ.ನರಸೀಪುರ ಪಟ್ಟಣದಲ್ಲಿ ಪುರಸಭೆಯವರು ಮಟನ್ ಮಾರ್ಕೆಟ್‌ಗಳ ಸಮೀಪ ಸ್ವಚ್ಛತೆ ಕಾಪಾಡದಿರುವುದರಿಂದ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶ ಕೊಳೆತು ನಾರುತಿದ್ದು, ಡೆಂೆಯಂತಹ ಕಾಯಿಲೆಗಳು ಉಲ್ಬಣವಾದರೆ ಅದಕ್ಕೆ ಪುರಸಭೆ ಅಧಿಕಾರಿಗಳೇ ಹೊಣೆ ಮಾಡಬೇಕು ಎಂದು ರೈತರು ತಾಲೂಕು ಆಡಳಿತವನ್ನು ಆಗ್ರಹಿಸಿದರು.


ನೀರಾವರಿ ಇಲಾಖೆಯವರು ನಾಲೆಗಳಿಗೆ ನೀರು ಕೊಡುವ ಮುಂಚೆ ಕಾಲುವೆಗಳ ಹೂಳೆತ್ತಿಸದೆ, ಕೆರೆಗಳು ಕಟ್ಟೆಗಳ ಅಭಿವೃದ್ಧಿಯನ್ನೂ ಮಾಡಿಲ್ಲ. ಕೆರೆಗಳ ಒತ್ತುವರಿಯನ್ನು ತೆರವು ಮಾಡದ್ದರಿಂದ ಓಡಾಡುವ, ನೀರು ಹರಿಯುವ ಅಡ್ಡಹಳ್ಳ ರಸ್ತೆಗಳ ಅತಿಕ್ರಮಣಗೊಂಡು ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯದೆ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ರೈತರು ದೂರಿದರು.


ತಾಲೂಕಿನಲ್ಲಿ ಅಬಕಾರಿ ಇಲಾಖೆ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ ಇರುವುದರಿಂದ ಪ್ರತಿ ಗ್ರಾಮದಲ್ಲೂ ಮದ್ಯ ಮುಕ್ತವಾಗಿ ಎಲ್ಲರಿಗೂ ಸಿಗುವಂತಾಗಿದೆ. ಸರ್ಕಾರವೇ ಮದ್ಯ ಮಾರಾಟಕ್ಕೂ ಟಾರ್ಗೆಟ್ ನೀಡುತ್ತದೆ. ಮತ್ತೊಂದೆಡೆ ಕುಡಿದವರನ್ನು ಹಿಡಿದು ದಂಡ ಕಟ್ಟಸುತ್ತಿದ್ದಾರೆ ಎಂದು ಆಡಳಿತ ನಡೆಸುವವರ ದ್ವಂದ್ವ ನಿಲುವಿನ ಬಗ್ಗೆ ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.


ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತಮವಾದ ಬಿತ್ತನೆ ಬೀಜ ನೀಡಬೇಕು. ಅಲ್ಲದೆ ರಸಗೊಬ್ಬರ ಮಾರಾಟ ಮಾಡುವ ಖಾಸಗಿ ಅಂಗಡಿಗಳಲ್ಲಿ ದರ ನಿಗದಿ ಬಗ್ಗೆ ಬೋರ್ಡ್ ಹಾಕಬೇಕು. ಮುಖಂಡರು ಹೋದರೆ ಐವತ್ತು ನೂರು ಕಡಿಮೆ ಕೊಡುವುದು. ಸಾಮಾನ್ಯ ರೈತ ಖರೀದಿಗೆ ಹೆಚ್ಚು ದರವನ್ನು ಪಡೆಯುವುದು ಮಾಮೂಲಿಯಾಗಿದ್ದು, ಇಂತಹ ತಾರತಮ್ಯ ನಿಲ್ಲುವಂತಾಗಲು ಅಧಿಕಾರಿಗಳು ಕ್ರಮವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಬೆಳೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹಲವರು ಆಗ್ರಹಿಸಿದರು.


ಸರ್ಕಾರದ ಜಮೀನಿನಲ್ಲಿ ರೈತರ ಓಡಾಟಕ್ಕೆ ಸರಿಯಾದ ದಾರಿ ಮಾಡಿಕೊಡದೆ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುವಲ್ಲಿ ಕಂದಾಯ ಮತ್ತು ನೀರಾವರಿ ನಿಗಮದ ಅಧಿಕಾರಿಗಳು ವಿಫಲರಾಗಿದ್ದಾರೆ. ಅಂತಹವರ ವಿರುದ್ಧ ತಾಲೂಕು ಆಡಳಿತವೂ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇಂಥವರ ವಿರುದ್ಧ ಪೊಲೀಸ ಇಲಾಖೆಯ ಎಫ್‌ಐಆರ್ ಹಾಕದೆ ಇರುವುದು ಬೇಸರ ಸಂಗತಿ ಎಂದು ರೈತ ಮುಖಂಡರು ಆರೋಪಿಸಿದರು.


ಸಭೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬನ್ನೂರು ನಾರಾಯಣ್, ಕರೋಹಟ್ಟಿ ಕುಮಾರಸ್ವಾಮಿ, ಆಲಗೂಡು ಮಹದೇವ್, ಕುರುಬೂರು ಸಿದ್ದೇಶ್, ಅತ್ತಹಳ್ಳಿ ಶಿವನಂಜು, ಬಿ.ಸೀಹಳ್ಳಿ ರಾಜೂಗೌಡ, ಎ.ಶಿವಕುಮಾರ್(ಬಡ್ಡು), ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.