ಜಿಲ್ಲೆ

ಮಂಗಳೂರು ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಗೆ ಮತ್ತೆ ವಿಘ್ನ

Prashanth S Suvarna

ಶ್ರವಣ್ ಕುಮಾರ್ ನಾಳ ಮಂಗಳೂರು
ಆ್ಯಂಟನಿ ವೇಸ್ಟ್‌ಗೆ ನೀಡಿರುವ ಮಂಗಳೂರು ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆ ಗುತ್ತಿಗೆಯನ್ನು ಮುಂದಿನ 6 ತಿಂಗಳವರೆಗೆ (ಆ.1ರಿಂದ ಜ.31ರವರೆಗೆ)ವಿಸ್ತರಿಸಲು ಮಂಗಳೂರು ಪಾಲಿಕೆ ನಿರ್ಧರಿಸಿದರೂ ಸಂಸ್ಥೆ ಪಾಲಿಕೆಗೆ ಹೊಸ ಷರತ್ತು ವಿಧಿಸಿದ್ದರಿಂದ ಕಸ ವಿಲೇವಾರಿಗೆ ಮತ್ತೆ ವಿಘ್ನ ಎದುರಾಗಿದೆ.

ಮಂಗಳೂರು ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯನ್ನು ಆ್ಯಂಟನಿ ಸಂಸ್ಥೆಗೆ 2014ರ ಆ.22ರಂದು 7 ವರ್ಷಗಳ ಗುತ್ತಿಗೆ ಅವಧಿಗೆ ಪಡೆದಿತ್ತು, ಕಾರ್ಯಾದೇಶವಾದ ಬಳಿಕ, 2015 ರ ೆ.2ರಿಂದ 2022ರ ಜ.31ರವರೆಗೆ ಗುತ್ತಿಗೆ ಅವಧಿ ಚಾಲ್ತಿಯಲ್ಲಿತ್ತು. ಈ ಅವಧಿಯಲ್ಲಿ ಹೊಸ ವ್ಯವಸ್ಥೆ ಆಗದ ಕಾರಣ ಸಂಸ್ಥೆಗೆ ನೀಡಿರುವ ಗುತ್ತಿಗೆಯನ್ನು ಒಂದು ವರ್ಷ ವಿಸ್ತರಣೆ ಮಾಡಲಾಗಿತ್ತು. ಬಳಿಕವೂ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕಾಗದೆ ಪಾಲಿಕೆಯು ಜ.1ರಿಂದ ಜು.31ರ ವರೆಗೆ ಗುತ್ತಿಗೆ ಅವಧಿ ವಿಸ್ತರಣೆ ಮಾಡಿತ್ತು. ಸಂಸ್ಥೆಯ ಗುತ್ತಿಗೆ ಅವಧಿ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳುತ್ತಿದ್ದು, ಪಾಲಿಕೆಯ ಹೊಸ ಯೋಜನಾ ವರದಿಯ ಪ್ರಕಾರ ತ್ಯಾಜ್ಯ ನಿರ್ವಹಣೆ ಆರಂಭಕ್ಕೆ ಇನ್ನೂ ಕೆಲವು ತಿಂಗಳು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೆ ಆ್ಯಂಟನಿ ಸಂಸ್ಥೆಯ ಗುತ್ತಿಗೆಯನ್ನು ಮುಂದಿನ 6 ತಿಂಗಳ ಕಾಲ (2024ರ ಜ.31ರವರೆಗೆ) ವಿಸ್ತರಿಸಲು ಪಾಲಿಕೆ ನಿರ್ಧರಿಸಿತ್ತು.

ಗುತ್ತಿಗೆ ಅವಧಿ ವಿಸ್ತರಣೆ ಅನಿವಾರ್ಯ

ಆ್ಯಂಟನಿ ಸಂಸ್ಥೆ ಪಾಲಿಕೆ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ಅವಧಿ ಜು.31ಕ್ಕೆ ಅಂತ್ಯಗೊಳ್ಳುತ್ತದೆ. ಮುಂದಿನ ಅವಧಿಗೆ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಟ ಕಾರ್ಯವನ್ನು ಕೈಗೊಳ್ಳಲು ತಯಾರಿಸಲಾದ ಪಾಲಿಕೆಯ ಹೊಸ ಯೋಜನಾ ವರದಿಯು ಸರ್ಕಾರದಿಂದ ಅನುಮೋದನೆಗೊಂಡಿದೆ. ಈ ಯೋಜನಾ ವರದಿಯಂತೆ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ವಾಹನ- ಯಂತ್ರೋಪಕರಣ ಖರೀದಿ ಪ್ರಕ್ರಿಯೆ ಈಗಾಗಲೇ ಬಹುತೇಕ ಪೂರ್ಣಗೊಳಿಸಲಾಗಿದೆ. ಆದರೆ ಕಾರ್ಯಾಚರಣೆ-ನಿರ್ವಹಣೆ ನಡೆಸುವ ಟೆಂಡರ್ ಪೂರ್ಣವಾಗಲು ಒಂದೆರಡು ತಿಂಗಳು ಬೇಕಾಗಬಹುದು. ಹೀಗಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಆ್ಯಂಟನಿ ಸಂಸ್ಥೆಗೆ ಗುತ್ತಿಗೆ ಅವಧಿಯನ್ನು ಆ.1ರಿಂದ 6 ತಿಂಗಳ ಅವಧಿಗೆ ವಿಸ್ತರಿಸಲಾಗುತ್ತಿದೆ. ಈ ಅವಧಿಯ ಮೊದಲೇ ಹೊಸ ವ್ಯವಸ್ಥೆ ಜಾರಿಗೊಳಿಸುವುದು ಪಾಲಿಕೆ ಉದ್ದೇಶ.

ಲೀಗಲ್ ನೋಟೀಸ್

ಆ.1ರಿಂದ ಮಂಗಳೂರಿನಲ್ಲಿ ಕಸ ಸಂಗ್ರಹ ಮಾಡಲು ಸಾಧ್ಯವಿಲ್ಲ. ಇದುವರೆಗೆ ಪಾಲಿಕೆಯು ಉದ್ದೇಶಪೂರ್ವಕವಾಗಿ ಸುಮಾರು 68.85 ಕೋಟಿ ರೂ. ಮೊತ್ತವನ್ನು ಪಾವತಿಸದೆ ಬಾಕಿ ಇರಿಸಿಕೊಂಡಿದೆ. ಈ ಮೊತ್ತವನ್ನು ಏಳು ದಿನದೊಳಗೆ ಪಾವತಿಸಬೇಕು. ಬಾಕಿ ಇರಿಸಲಾದ ದಿನದಿಂದ ಬಾಕಿ ಮೊತ್ತಕ್ಕೆ ಶೇ 18ರಷ್ಟು ಬಡ್ಡಿ ಸೇರಿಸಿ ಪೂರ್ಣ ಪಾವತಿ ಮಾಡಬೇಕು. ಪಾಲಿಕೆಯಲ್ಲಿ ಕಸ ಸಂಗ್ರಹ ಮಾಡುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಆ್ಯಂಟನಿ ಸಂಸ್ಥೆ ಮಂಗಳೂರು ಮಹಾನಗರಪಾಲಿಕೆಗೆ ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದೆ.

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಹೊಸ ವ್ಯವಸ್ಥೆ ಸಿದ್ದಗೊಂಡಿದ್ದು, ಯೋಜನೆ ಜಾರಿಯಾಗಲು ಕೆಲವು ಸಮಯ ಬೇಕಾಗಬಹುದು. ಹಾಗಾಗಿ ಮಂಗಳೂರು ಪಾಲಿಕೆ ವತಿಯಿಂದ ಆ್ಯಂಟನಿ ಸಂಸ್ಥೆಯವರ ಜತೆಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ. ಹಾಗೂ ಈ ಎಲ್ಲ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು.- ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ