ಜಿಲ್ಲೆ

ಪ್ರಯಾಣ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Kopala - Raveendra V K

ಕೊಪ್ಪಳ: ರಾಜ್ಯ ಸರ್ಕಾರವು ಸಾರಿಗೆ ಬಸ್​ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರ ಬಸ್​ ಪ್ರಯಾಣ ದರ ಹೆಚ್ಚಳ ಮಾಡಿ ಬಡ, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರ ಮೇಲೆ ಹೊರೆ ಏರಿದೆ. ಸರ್ಕಾರಿ ಬಸ್​ಗಳನ್ನೇ ಅವಲಂಬಿಸಿ ಅನೇಕ ಜನ ದಿನನಿತ್ಯ ಓಡಾಡುತ್ತಾರೆ. ಆದರೆ, ರಾಜ್ಯ ಸರ್ಕಾರವು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು.

ಶಕ್ತಿ ಯೋಜನೆಯಿಂದಾಗಿ ಬಸ್​ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಬಂದರೂ ಬಸ್​ಗಳ ಹೆಚ್ಚಳ ಮಾಡುತ್ತಿಲ್ಲ. ಅಲ್ಲದೇ ಬಸ್​ಗಳು ತುಂಬಿಕೊಂಡೆ ಓಡಾಡುವುದರಿಂದ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ, ಕಾಲೇಜುಗಳಿಗೆ ಹಾಜರಾಗಲು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ಸರ್ಕಾರವು ಕೂಡಲೇ ಬಸ್​ಗಳನ್ನು ಹೆಚ್ಚಿಸಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.

ಬಸ್​ ನಿಲ್ದಾಣದ ಬಳಿ ರಸ್ತೆ ತಡೆದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಶಶಾಂಕ್​ ಪಾಟೀಲ್​, ನಗರ ಕಾರ್ಯದರ್ಶಿ ಹಮ್ಮಿಗೇಶ ಎಸ್​.ಪಿ, ತಾಲೂಕ ಸಂಚಾಲಕರಾದ ಗಣೇಶ್​ ರಾಥೋಡ್​, ಪ್ರಮುಖರಾದ ಕೃಷ್ಣ ಮುರಾರಿ, ಶಿವು ನವಲಿ, ಬಸವರಾಜ, ಲಕ್ಷ$್ಮಣ, ವೀರೇಂದ್ರ, ಸುದೀಪ, ಮನೋಹರ್​, ರಾಧಿಕಾ, ರೇಣುಕಾ, ಪಲ್ಲವಿ, ತೇಜಸ್ವಿನಿ ತ್ರಿವೇಣಿ ಇತರರಿದ್ದರು.