ರಟ್ಟಿಹಳ್ಳಿ: ಪಟ್ಟಣದ ಜನತಾ ಪ್ಲಾಟ್ ಶಿರಗಂಬಿ ರಸ್ತೆಯಲ್ಲಿ ನಿರ್ವಣವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ, ಕಾಂಪೌಂಡ್ ಹಾಗೂ ಇತರ ಮೂಲಸೌಲಭ್ಯಗಳಿಂದ ವಂಚಿವಾಗಿದ್ದು, ಕಾರ್ಯಕ್ರಮಗಳು ನೆರವೇರದೇ ಪಾಳು ಬಿದ್ದಿದೆ.
ಪಟ್ಟಣದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಜನತಾ ಪ್ಲಾಟ್ ಶಿರಗಂಬಿ ರಸ್ತೆಯಲ್ಲಿ ಒಟ್ಟು 8 ಮುಕ್ಕಾಲು ಗುಂಟೆಯಲ್ಲಿ ಜಿಲ್ಲಾ ನಿರ್ವಿುತಿ ಇಲಾಖೆಯಿಂದ ಒಟ್ಟು 1.5 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. 2020ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭವನವನ್ನು ಉದ್ಘಾಟಿಸಿದ್ದರು. ಬಳಿಕ ಸ್ಥಳೀಯ ದಲಿತ ಸಮಾಜ ಹಾಗೂ ಇತರ ಸಂಘಟನೆಗಳ ಸಹಕಾರದಿಂದ ಮಾಜಿ ಸಚಿವ ಬಿ.ಸಿ. ಪಾಟೀಲ ಮತ್ತು ಶಾಸಕ ಯು.ಬಿ. ಬಣಕಾರ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿಸಲಾಗಿತ್ತು.
ಅಂಬೇಡ್ಕರ್ ಭವನದಲ್ಲಿ ವಿವಿಧ ಸಂಘಟನೆಗಳ ಕಾರ್ಯಕ್ರಮಗಳು, ಸಾರ್ವಜನಿಕರ ಮತ್ತು ದಲಿತ ಸಮಾಜದ ಶುಭ ಸಮಾರಂಭಗಳು ನೆರವೇರಬೇಕಿತ್ತು. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಭವನ ಪಾಳು ಬಿದ್ದಿದೆ. ಭವನಕ್ಕೆ ಅವಶ್ಯವಾಗಿ ಬೇಕಾಗಿರುವ ವಿದ್ಯುತ್ ಸಂಪರ್ಕ, ನೀರಿನ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಸಮಾರಂಭಗಳು ನಡೆಯುತ್ತಿಲ್ಲ. ದಲಿತ ಸಮಾಜದ ಹಿರಿಯರು ಇತ್ತೀಚೆಗೆ ತಹಸೀಲ್ದಾರರಿಗೆ ಮನವಿ ಮಾಡಿದ್ದು, ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಶಿರಗಂಬಿ ರಸ್ತೆಯಿಂದ ಸುಮಾರು 300 ಮೀಟರ್ ಉದ್ದದವರೆಗೆ ಕಚ್ಚಾ ರಸ್ತೆಯಿಂದ ಸಂಪರ್ಕ ಇರುವ ಭವನಕ್ಕೆ ಈಗಾಗಲೇ ಅರ್ಧಂಬರ್ಧ ಸಿ.ಸಿ. ರಸ್ತೆ ನಿರ್ಮಾಣ ಮಾಡಲಾಗಿದೆ. ಉಳಿದ 100 ಮೀಟರ್ ಕಚ್ಚಾ ರಸ್ತೆ ಹಾಗೆಯೇ ಇದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಭಾರಿ ಸಮಸ್ಯೆಯಾಗುತ್ತಿದೆ.
ಹಿಂದು ಸಂಪ್ರದಾಯದಂತೆ ಯಾವುದೇ ಶುಭ ಸಮಾರಂಭಗಳು ಪೂರ್ವಾಭಿಮುಖವಾಗಿ ಜರುಗುತ್ತದೆ. ಆದರೆ, ಇಲ್ಲಿ ವೇದಿಕೆಯನ್ನು ಪಶ್ಚಿಮ ದಿಕ್ಕಿಗೆ ಮುಖವಾಗಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಶುಭ ಸಮಾರಂಭ ಮಾಡಲು ಯಾರೂ ಮುಂದಾಗುತ್ತಿಲ್ಲ ಎನ್ನಲಾಗಿದೆ. ಭವನದಲ್ಲಿ ಪೂರ್ವ ದಿಕ್ಕಿಗೆ ಮುಖವಾಗಿ ಮತ್ತೊಂದು ವೇದಿಕೆ ನಿರ್ಮಾಣ ಮಾಡಿದರೆ ಕಾರ್ಯಕ್ರಮಗಳು ಜರಗುತ್ತವೆ ಎಂದು ಸ್ಥಳೀಯ ದಲಿತ ಸಮಾಜದ ಮುಖಂಡರು ಹೇಳುತ್ತಾರೆ.
ಅಂಬೇಡ್ಕರ್ ಭವನವನ್ನು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಸ್ತಾಂತರಿಸುವುದು ಬಾಕಿ ಇದೆ. ದಲಿತ ಸಮಾಜದ ಒಂದು ಸಮಿತಿ ನೇಮಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಅಂಬೇಡ್ಕರ್ ಭವನ ಎಲ್ಲರ ಸೇವೆಗೆ ಸದುಪಯೋಗವಾಗುತ್ತದೆ. ಪಟ್ಟಣ ಪಂಚಾಯಿತಿಗೆ ಹಸ್ತಾಂತರವಾದರೆ ಇಲ್ಲಿನ ರಸ್ತೆಯ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ.
ಅಂಬೇಡ್ಕರ್ ಭವನವು ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲದೇ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮುಖ್ಯವಾಗಿ ವೇದಿಕೆಯನ್ನು ಪೂರ್ವ ದಿಕ್ಕಿನಲ್ಲಿ ನಿರ್ಮಾಣ ಮಾಡಿದರೆ ಇಲ್ಲಿ ಎಲ್ಲ ಶುಭ ಸಮಾರಂಭಗಳು ಜರುಗುತ್ತವೆ. ಭವನಕ್ಕೆ ಅವಶ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿ ಶೀಘ್ರವೇ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿ ಸಮಿತಿ ರಚನೆಗೆ ಅಧಿಕಾರಿಗಳು ಮುಂದಾಗಬೇಕಾಗಿದೆ. | ಹನುಮಂತಪ್ಪ ಗಾಜೇರ, ಸಿದ್ದಪ್ಪ ಹರಿಜನ ಸ್ಥಳೀಯ ನಿವಾಸಿಗಳು ರಟ್ಟಿಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಭವನಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲಾಗುವುದು. ಬಳಿಕ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿ ಅಭಿವೃದ್ಧಿಗಾಗಿ ಒಂದು ಸಮಿತಿ ರಚನೆ ಮಾಡಲಾಗುವುದು. | ಮಹೆಬೂಬಸಾಬ ನದಾಫ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಿರೇಕೆರೂರು, ರಟ್ಟಿಹಳ್ಳಿ ತಾಲೂಕು