ಜಯಪುರ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಹೊರಟಿರುವ ಗ್ರಾಮ ಪಂಚಾಯಿತಿ ನಿಲುವು ಅವೈಜ್ಞಾನಿಕ ಎಂದು ಸಾಮಾಜಿಕ ಕಾರ್ಯಕರ್ತ ಅನಿಲ್ ಡಿಮೆಲ್ಲೂ ದೂರಿದರು.
ಗ್ರಾಮದ ಸ.ನಂ.115ರ ಗುಬ್ಬಿಬೈಲು ಪ್ರದೇಶದಲ್ಲಿ ಸುಮಾರು 2 ಎಕರೆ ಜಾಗ ತ್ಯಾಜ್ಯ ನಿರ್ವಹಣಾ ಘಟಕಕ್ಕಾಗಿ ಮಂಜೂರಾಗಿದ್ದು, ಗ್ರಾಪಂ ಹೆಸರಿಗೆ ಪಹಣಿ ಮಾಡಲಾಗಿದೆ. ಗ್ರಾಪಂನಿಂದ ಈ ಹಿಂದೆ ಗುಬ್ಬಿಬೈಲಿನ ಕಸ ವಿಲೇವಾರಿ ಘಟಕ ಅಭಿವೃದ್ಧಿ ಪಡಿಸಲು ಸುಮಾರು 9 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೆ ಗ್ರಾಪಂ ಈ ಜಮೀನಿನಲ್ಲಿ ಕಸ ವಿಲೇವಾರಿ ಕೈಬಿಟ್ಟು ಪಟ್ಟಣದ ನಡುವೆ ಕಸ ವಿಲೇವಾರಿ ಮಾಡುತ್ತಿದೆ. ಕಸ ವಿಲೇವಾರಿಗಾಗಿ ಮಂಜೂರಾದ ಸ್ಥಳದಲ್ಲಿ ಘಟಕ ಸ್ಥಾಪಿಸುವಂತೆ ಸಾರ್ವಜನಿಕರು ಲಿಖಿತ ಮನವಿ ಸಲ್ಲಿಸಿ, ಒತ್ತಾಯ ಮಾಡುತ್ತಿದ್ದರೂ ಗ್ರಾಪಂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
50-60 ವರ್ಷಗಳಿಂದಲೂ ಪೇಟೆ ಮಧ್ಯೆಯೇ ಕಸ ವಿಲೇವಾರಿ ಮಾಡಲಾಗುತ್ತಿದೆ. ಈಗಲೂ ವೈಜ್ಞಾನಿಕ ವಿಧಾನದಲ್ಲಿಯೇ ವಿಲೇವಾರಿ ಮಾಡಲಾಗುವುದು ಎಂಬುದಾಗಿ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಿನಾಥ ಬಸದಿ ಅರ್ಚಕ ನಾಗೇಂದ್ರ ಜೈನ್ ಮಾತನಾಡಿ, ಶಾಶ್ವತ ಕಸ ವಿಲೇವಾರಿ ಘಟಕ ಜೈನ ಬಸದಿಗೆ ಸಮೀಪ ಇರುವುದರಿಂದ ಬಸದಿ ಪಾವಿತ್ರೃಕ್ಕೆ ಧಕ್ಕೆ ಉಂಟಾಗುತ್ತಿದೆ. 50-60 ವರ್ಷಗಳ ಹಿಂದೆ ಜಯಪುರದ ಜನಸಂಖ್ಯೆ ಕಡಿಮೆಯಿತ್ತು. ಈಗ 1350ಕ್ಕೂ ಹೆಚ್ಚು ಮನೆಗಳಿರುವ ಗ್ರಾಪಂ ವ್ಯಾಪ್ತಿಯಲ್ಲಿ 5500ಕ್ಕೂ ಹೆಚ್ಚು ಜನಸಂಖ್ಯೆಯಿದೆ ಎಂದರು.
ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಕಸ ವಿಲೇವಾರಿ ಮಾಡದೆ ಸುಮಾರು 50 ದಿನಗಳು ಕಳೆದಿವೆ. ಅಂಗಡಿ, ಹೋಟೆಲ್ ಹಾಗೂ ಮನೆಗಳಲ್ಲಿ ಸಂಗ್ರಹವಾದ ಕಸ ಅಲ್ಲಲ್ಲಿ ಸುಡುತ್ತಿದ್ದಾರೆ. ಇನ್ನು ಕೆಲವರು ರಸ್ತೆ ಬದಿ ಬಿಸಾಡುತ್ತಿದ್ದಾರೆ. ಹಲವರು ಹಳ್ಳಕ್ಕೆ ಎಸೆಯುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಹುಡುಕಿ ಕಸ ವಿಲೇವಾರಿ ಮಾಡದೆ ಹೋದರೆ ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ನಾಗರಾಜ್, ಪರಿಮಳಾ ಗಣೇಶ್, ಗೋಪಾಲಕೃಷ್ಣ, ಗಜಾನನ ಗಣೇಶ್, ಜಗನ್ನಾಥ್, ಮಹೇಶ್, ನಂದಿನಿ ಇದ್ದರು.