ಬಂಟ್ವಾಳ: ಸಜೀಪ ನಡು ಗ್ರಾಮದ ಕಂಚಿನಡ್ಕಪದವಿನ ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಯಾಯ ದಿನ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಅದೇ ದಿನ ವಿಲೇವಾರಿ ಮಾಡಿ ಯಂತ್ರೋಪಕರಣಗಳನ್ನು ಸಮರ್ಪಕವಾಗಿ ಬಳಸಿ ಗೊಬ್ಬರವಾಗಿ ಪರಿವರ್ತನೆ ಮಾಡಬೇಕು. ಜತೆಗೆ ಘನತ್ಯಾಜ್ಯವನ್ನು ಕೂಡ ನಿಯಮಗಳ ಪ್ರಕಾರ ವಿಲೇವಾರಿ ಮಾಡಬೇಕು ಎಂದು ಬಂಟ್ವಾಳ ಪುರಸಭಾಧಿಕಾರಿಗಳಿಗೆ ಸೂಚಿಸಿದರು.
ಘಟಕಕ್ಕೆ ಬಂದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಇರುವುದರಿಂದ ದುರ್ನಾತ ಬೀರುವ ಸಾಧ್ಯತೆ ಇದ್ದು, ಈ ಕುರಿತು ಈಗಾಗಲೇ ಸಾಕಷ್ಟು ದೂರು ಬರುತ್ತಿವೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅಂತಹ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಸಜೀಪ ಜಿಲ್ಲಾಧಿಕಾರಿಗೆ ಪರಿಸ್ಥಿತಿ ವಿವರಿಸಿದರು. ಎಸಿ ಹರ್ಷವರ್ಧನ ಪಿ.ಜೆ, ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಗ್ರಾ.ಪಂ. ಸದಸ್ಯರಾದ ಲತೀಫ್ ಬೋಳಮೆ, ಅಬ್ದುಲ್ ರಹಿಮಾನ್, ರಫೀಕ್, ಇಸ್ಮಾಯಿಲ್, ಸೋಮನಾಥ್ ಭಂಡಾರಿ, ಪ್ರವೀಣ್ ಆಳ್ವ, ಹನೀಫ್ ಮೊದಲಾದವರು ಹಾಜರಿದ್ದರು.