ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಸಿಎಂ ಕಾರ್ಯಕ್ರಮದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸುವ ಸಂಬಂಧ ರೈತ ಮುಖಂಡರ ಸಭೆ ನಡೆಸಿ ಮಾತನಾಡಿದರು. 
ಜಿಲ್ಲೆ

ವಕ್ಫ್ ಹೆಸರು ತೆಗೆಯಲು ಆದೇಶದಿದ್ದರೆ ಕಪ್ಪು ಬಾವುಟ ಪ್ರದರ್ಶನ

ತಿ.ನರಸೀಪುರ: ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನೋಂದಣಿ ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರದ ಕುಮ್ಮಕ್ಕು ನೀಡುತ್ತಿದ್ದು, ಕೂಡಲೇ ರೈತರ ಪಹಣಿಯಲ್ಲಿ ವಕ್ಪ್ ಹೆಸರು ತೆಗೆದು ಹಾಕಲು ಕಠಿಣ ಆದೇಶ ನೀಡದಿದ್ದರೆ ನ.13 ರಂದು ನಡೆಯಲಿರುವ ಮುಖ್ಯಮಂತ್ರಿ ಭಾಗಿಯಾಗುವ ವಿವಿಧ ಅಭಿವೃದ್ಧಿ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಎಚ್ಚರಿಸಿದ್ದಾರೆ.

ಹೋರಾಟದ ಪೂರ್ವಭಾವಿಯಾಗಿ ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ರೈತ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕೃಷಿ ಜಮೀನು ಮತ್ತು ಸ್ಮಶಾನ ಭೂಮಿಗಳನ್ನು ಕಸಿದುಕೊಳ್ಳಲು ಹೊರಟಿರುವ ವಕ್ಪ್ ಬೋರ್ಡ್ ಅನ್ಯಾಯದ ಕೃತ್ಯಕ್ಕೆ ಕಡಿವಾಣ ಹಾಕುವ ಆದೇಶವನ್ನು ತುರ್ತಾಗಿ ನೀಡಬೇಕು. ತಪ್ಪಿದ್ದಲ್ಲಿ ನ.13ರಂದು ತಾಲೂಕಿನ ಹೊರಳಹಳ್ಳಿ ಬಳಿಯಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಬರುತ್ತಿರುವ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ರೈತರ ಆಸ್ತಿಗಳ ಮೇಲೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ವಕ್ಫ್ ಬೋರ್ಡ್ ಕಬಳಿಸುವ ಹುನ್ನಾರಕ್ಕೆ ಆಡಳಿತರೂಢ ಸರ್ಕಾರದ ಕುಮ್ಮಕ್ಕಿದೆ. ಸಚಿವ ಜಮೀರ್ ಅಹಮ್ಮದ್ ಅವರ ಹೇಳಿಕೆಗಳು ಕೂಡ ರೈತರ ಮೇಲೆ ಪ್ರಯೋಗವಾಗುತ್ತಿರುವ ಗದಪ್ರಹಾರವನ್ನು ಎತ್ತಿ ತೋರಿಸುತ್ತಿದೆ. ರಾಜ್ಯದ ಜನರು, ರೈತರು ಮತ ಹಾಕಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿರುವುದು ರೈತರ ಪಹಣಿಯನ್ನು ಅಥವಾ ಅವರ ಆಸ್ತಿಯ ಮೇಲೆ ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ನಮೂದಿಸುತ್ತಿರುವುದು ರೈತರನ್ನು ಹಾಗೂ ರೈತರ ಕುಟುಂಬವನ್ನು ಕಂಗಾಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯ ಸರ್ಕಾರ ಮುಂದಿನ 24 ಗಂಟೆ ಒಳಗಡೆ ರೈತರ ಪಹಣಿಗಳಿಂದ ಅಥವಾ ಆಸ್ತಿಗಳಿಂದ ವಕ್ಫ್ ಹೆಸರು ತೆಗೆದು ಹಾಕಬೇಕೆಂದು ಬನ್ನೂರು ನಾರಾಯಣ ಆಗ್ರಹಿಸಿದ್ದಾರೆ. ಬನ್ನೂರು ಹೋಬಳಿಯ ರೈತ ಮುಖಂಡರು ಇದ್ದರು.