ಆಲೂರು : ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೈಗೊಂಡಿರುವ ಅನಿರ್ಧಾವಷ್ಟಾವಧಿ ಮುಷ್ಕರಕ್ಕೆ ಆಲೂರು ತಾಲೂಕು ಘಟಕದಿಂದಲೂ ಬೆಂಬಲ ನೀಡಲಾಯಿತು.
ತಾಲೂಕು ಕಚೇರಿಯ ಮುಂಭಾಗ ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಕಪ್ಪು ಪಟ್ಟಿ ಧರಿಸಿ ಅಸಹಕಾರ ನೀಡಿದರು. ತಹಸೀಲ್ದಾರ್ ನಂದಕುಮಾರ್ ಅವರ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕಂದಾಯ ಇಲಾಖೆಯ ನೌಕರರ ಸಂಘದ ತಾಲೂಕು ಅಧ್ಯಕ್ಷ ರವಿನಾಯ್ಕ, ರಾಜ್ಯ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಹೆಚ್ಚೆಚ್ಚು ಸಾರ್ವಜನಿಕ ಸೇವೆಯನ್ನು ನಿರ್ವಹಿಸುವ ಜವಾಬ್ದಾರಿಗಳನ್ನು ನೀಡುತ್ತಿದೆ. ಹೆಚ್ಚುವರಿ ಕೆಲಸ ನಿರ್ವಹಿಸಲು ದೈಹಿಕ ಮತ್ತು ಮಾನಸಿಕವಾಗಿ ನಮಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಭತ್ಯೆ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಹಲವು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಆದ್ದರಿಂದ ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲ ಸೌಕರ್ಯಗಳನ್ನು ನೀಡದಿರುವುದರಿಂದ ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಯಾವುದೇ ಮೂಲ ಸೌಕರ್ಯಗಳನ್ನು ಸರ್ಕಾರ ನೀಡದೆ ಟಾರ್ಗೆಟ್ ನೀಡಿದರೆ ಯಾವ ಕೆಲಸ ಮಾಡುವುದು. ಇದರಿಂದ ಒತ್ತಡ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅಭಿಷೇಕ್ ಮಾತನಾಡಿದರು. ಉಪಾಧ್ಯಕ್ಷ ಸಂಜೀವ್, ಪ್ರಧಾನ ಕಾರ್ಯದರ್ಶಿ ದೇವೆಂದ್ರಪ್ಪ, ಖಜಾಂಚಿ ರಾಘವೇಂದ್ರ, ಮಂಜಪ್ಪ ಬಂಡಾರಿ, ಸಿಬ್ಬಂದಿ ಸಂತೋಷ್, ಗೀತಾ, ಅಮೂಲ್ಯ, ಚಂದ್ರಶೇಖರ, ಹೇಮರಾಜು, ಬಸವರಾಜು, ಮನು, ರಂಗಸ್ವಾಮಿ ಇತರರು ಇದ್ದರು.