ಜಿಲ್ಲೆ

ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಶೀಘ್ರದಲ್ಲಿ ರಾಷ್ಟ್ರಪತಿ ಅವರನ್ನು ಬಿಜೆಪಿ ಪ್ರಮುಖರ ನಿಯೋಗೊಂದಿಗೆ ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಾಲ್ಮೀಕಿ ನಿಗಮ, ಮುಡಾ ಹಗರಣ ಸೇರಿದಂತೆ ವಿವಿಧ ಹಗರಣಗಳ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂದ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದರು. ಮುಖ್ಯಮಂತ್ರಿ ಅವರು ಸಮರ್ಪಕ ಉತ್ತರ ನೀಡದ ಕಾರಣ ಪ್ರಾಸಿಕ್ಯೂಷನ್​ಗೆ ಅವಕಾಶ ನೀಡಿದ್ದಾರೆ. ರಾಜ್ಯಪಾಲರು ಕಾನೂನು ರೀತಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಕಾಂಗ್ರೆಸ್​ನವರು ರಾಜ್ಯಪಾಲರು ತಪು್ಪ ಮಾಡಿದಂತೆ ಅವರ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ದೂರಿದರು.

ರಾಜ್ಯಪಾಲರು ಬಿಜೆಪಿಯ ಏಜೆಂಟ್, ಬಿಜೆಪಿ ಅಧ್ಯಕ್ಷ ಎಂದೆಲ್ಲ ಕಾಂಗ್ರೆಸ್​ನ ಸಚಿವರು, ಶಾಸಕರು, ಮುಖಂಡರು ಸಂಬೋಧಿಸುತ್ತಿದ್ದಾರೆ. 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯಪಾಲರನ್ನು ತಮ್ಮ ಪಕ್ಷದ ಏಜೆಂಟ್ ಅಥವಾ ಅಧ್ಯಕ್ಷ ಎಂದೇ ಭಾವಿಸಿತ್ತೇ ? ಎಂದು ಪ್ರಶ್ನಿಸಿದರು.

ದಿನೇಶ ಗುಂಡೂರಾವ್, ಕೃಷ್ಣ ಭೈರೇಗೌಡ, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್, ಐವಾನ್ ಡಿಸೋಜಾ ಸೇರಿದಂತೆ ಇತರ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್​ನ ಪ್ರಮುಖರು, ರಾಜ್ಯಪಾಲರಿಗೆ ನೀಡಬೇಕಾದ ಗೌರವ ಮರೆತಿದ್ದಾರೆ. ಅವರನ್ನು ಏಕ ವಚನದಿಂದ ಸಂಬೋಧಿಸುತ್ತಿದ್ದಾರೆ. ರಾಜ್ಯಪಾಲರ ಪ್ರತಿಕೃತಿ ದಹಿಸಿದ್ದಾರೆ. ಮನಬಂದಂತೆ ನಿಂದಿಸಿದ್ದಾರೆ. ರಾಜ್ಯಪಾಲರನ್ನು ನಾಲಾಯಕ್ ಎಂದಿದ್ದಾರೆ ಎಂದು ದೂರಿದರು.

ರಾಜ್ಯಪಾಲರ ವಿರುದ್ಧ ಸಲ್ಲದ ಹೇಳಿಕೆ ನೀಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ, ಎಫ್​ಐಆರ್ ದಾಖಲಿಸಿಲ್ಲ. ಶೀಘ್ರ ವಿಧಾನಸಭೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿ ಅವರನ್ನು ಭೇಟಿ ಮಾಡಿ, ರಾಜ್ಯಪಾಲರನ್ನು ನಿಂದಿಸಿರುವವರ ವಿರುದ್ಧ ಗೂಂಡಾ ಕಾಯ್ದೆ ಹಾಗೂ ಜಾತಿ ನಿಂದನೆ ಕಾಯ್ದೆ ದಾಖಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರದೇ ಇದ್ದರೆ ನ್ಯಾಯಾಲಯಕ್ಕೆ ಹೋಗಿ, ನ್ಯಾಯ ಪಡೆಯಲಿ. ಅದನ್ನು ಬಿಟ್ಟು ಬೀದಿರಂಪ ಮಾಡುವುದು ಸರಿಯಲ್ಲ ಎಂದರು.

ಹಿಂದುಳಿದ ನಾಯಕನೆಂಬ ಕಾರಣಕ್ಕೆ ಬಿಜೆಪಿಯವರನ್ನು ತಮ್ಮನ್ನು ಗುರಿಯಾಗಿಸುತ್ತಿದ್ದಾರೆ ಎಂದು ದೂರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಹಿಂದುಳಿದ ನಾಯಕನೆಂಬುದು ನೆನಪಾಗಲಿಲ್ಲವೇ ? ಪ್ರಧಾನಿ ವಿರುದ್ಧ ಏಕವಚನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ವಿರುದ್ಧ ಯಾವುದೇ ಆರೋಪ ಇರದಿದ್ದರೂ ಅವರ ರಾಜೀನಾಮೆ ಕೇಳಿದ್ದರು. ಈಗ ಹಲವಾರು ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಪತಿ ದ್ರೌಪದಿ ಮುಮು ಅವರ ಬಗ್ಗೆಯೂ ಕಾಂಗ್ರೆಸ್ ಮುಖಂಡರು ಜಾತಿ ನಿಂದನೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರ ತತ್ಮ, ಆದರ್ಶಗಳನ್ನು ಕೈ ಬಿಟ್ಟಿರುವ ಕಾಂಗ್ರೆಸ್ ಮುಖಂಡರು, ರಾಹುಲ್ ಗಾಂಧಿ ಆದರ್ಶವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಪಾಕಿಸ್ತಾನಪರ ಘೋಷಣೆ ಕೂಗುವ, ಭಾರತಕ್ಕೂ ಬಾಂಗ್ಲಾ ದುಸ್ಥಿತಿ ಬರುತ್ತದೆ ಎನ್ನುವ ಕಾಂಗ್ರೆಸ್ ಮುಖಂಡರು ದೇಶದ್ರೋಹಿಗಳು. ಭಾರತ ಸುಭಿಕ್ಷತೆಯಿಂದ ಕೂಡಿದ ದೇಶ. ಇಲ್ಲಿನ ಅಲ್ಪಸಂಖ್ಯಾತರು ಸೌಹಾರ್ಧತೆಯಿಂದ ಇದ್ದಾರೆ. ಆ ದೇಶಗಳ ಸ್ಥಿತಿ ಇಲ್ಲಿ ಉದ್ಭವಿಸಲು ಸಾಧ್ಯವಿಲ್ಲ ಎಂದರು.

ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರ ಬಿಟ್ಟು ತೊಲಗಲಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹೇಂದ್ರ ಕೌತಾಳ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.