ಕನಕಗಿರಿಯಲ್ಲಿ ಸಿಪಿಐ(ಎಂಎಲ್) ತಾಲೂಕು ಘಟಕದಿಂದ ತಹಸೀಲ್ದಾರ್ ಸಂಜಯ ಕಾಂಬ್ಳೆಗೆ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ಘಟನೆಗೆ ಕಾರಣರಾದ ಅಧಿಕಾರಿಗಳ ವಜಾಗೊಳಿಸಿ

ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಸಿಪಿಐ(ಎಂಎಲ್) ತಾಲೂಕು ಘಟಕದಿಂದ ತಹಸೀಲ್ದಾರ್ ಸಂಜಯ್ ಕಾಂಬಳೆಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಹೆಣ್ಣುಮಗು ಬಲಿಯಾದ ಬಳಿಕ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ

ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ಸಣ್ಣ ಹನುಮಂತಪ್ಪ ಮಾತನಾಡಿ, ಕನಕಗಿರಿ ತಾಲೂಕು ಬಸರಿಹಾಳದಲ್ಲಿ ಕೆಲ ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ವಾಂತಿ-ಭೇದಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರು ವಾಂತಿ ಬೇಧಿಗೆ ತುತ್ತಾಗಿದ್ದರೂ ಸಂಬಂಧಿಸಿದ ಪಿಡಿಒ ಕ್ರಮ ಕೈಗೊಂಡಿಲ್ಲ. ಒಂದು ವರ್ಷದ ಹೆಣ್ಣುಮಗು ಬಲಿಯಾದ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ ಎಂದು ದೂರಿದ ಅವರು, ಸಮಸ್ಯೆ ಕಾಣಿಸಿಕೊಂಡಾಗಲೇ ಎಚ್ಚೆತ್ತುಕೊಳ್ಳದ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


ರೋಗಿಗಳು ಚಿಕಿತ್ಸೆಗಾಗಿ ಗಂಗಾವತಿ, ಕೊಪ್ಪಳ, ಸಿಂಧನೂರಿಗೆ ತೆರಳಬೇಕಾಗಿದ್ದು, ಕನಕಗಿರಿ ಆಸ್ಪತ್ರೆಗೆ ವೈದ್ಯ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿದರು. ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಪಾಮಣ್ಣ ಅರಳಿಗನೂರು, ನಾಗರಾಜ ಉಮಳಿ ಕಾಟಾಪುರ ಇತರರಿದ್ದರು.