ಜಿಲ್ಲೆ

ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯಿಸಿ ಮನವಿ

Davangere - Desk - Ganesh M K

ಹರಿಹರ: ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬೀರೇನ್‌ಂಗ್ ಸರ್ಕಾರ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡಲು ಆಗ್ರಹಿಸಿ ಬುಧವಾರ ನಗರದಲ್ಲಿ ದಸಂಸ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು.

ನಂತರ ಮಾತನಾಡಿದ ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಈಶಾನ್ಯ ರಾಜ್ಯ ಮಣಿಪುರದಲ್ಲಿ 3 ತಿಂಗಳ ಹಿಂದೆ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಕುಕಿಜೋ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿದ ವೀಡಿಯೋ ಹರಿದಾಡಿದೆ. ಇದು ಮಣಿಪುರ ಹಿಂಸಾಚಾರದ ಅಘಾತಕಾರಿ ಮುಖ ತೆರೆದಿಟ್ಟಿದೆ. ಈ ಕೃತ್ಯವು ಇಡೀ ದೇಶ ಬೆಚ್ಚಿ ಬೀಳುವಂತೆ ಮಾಡಿದ್ದು, ಈ ಘಟನೆಯ ಪೂರ್ಣ ಹೊಣೆಗಾರಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಹೊತ್ತುಕೊಳ್ಳಬೇಕು ಎಂದರು.

ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿರುವ ಮಣಿಪುರ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಮಣಿಪುರದ ಮುಖ್ಯಮಂತ್ರಿ ಬೀರೇನ್‌ಸಿಂಗ್, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕೆಂಬುದು ಸಂಘಟನೆಯ ಆಗ್ರಹವಾಗಿದೆ ಎಂದರು.
ಕಡ್ಲೆಗೊಂದಿ ಗ್ರಾಪಂ ಸದಸ್ಯ ತಿಮ್ಮಣ್ಣ, ಭಾನುವಳ್ಳಿ ಸಿ. ಚೌಡಪ್ಪ , ಆನಂದ ಬೆಳ್ಳೂಡಿ, ಪ್ರವೀಣ್, ಲಿಂಗರಾಜ್, ಗುಳ್ಳಪ್ಪ, ನಿಂಗರಾಜ್, ಮಂಜುನಾಥ್, ಹನುಮಂತ, ಹರೀಶ್, ಕೆ.ಎಚ್. ಯಲ್ಲಪ್ಪ, ಎಚ್. ಹನುಮಂತಪ್ಪ, ಪಕ್ಕೀರಪ್ಪ, ಬಿ.ಎ. ಈರಣ್ಣ, ಹನುಮಜ್ಜ, ಹನುಮಕ್ಕ, ನಾಗಮ್ಮ, ಪುಷ್ಪ, ಭಾಗ್ಯಮ್ಮ, ಸುಶೀಲಮ್ಮ, ಹಾಲಮ್ಮ, ನಿರ್ಮಲಮ್ಮ, ಗುಳ್ಯಪ್ಪ ಇತರರಿದ್ದರು.