ಜಿಲ್ಲೆ

ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ದಿಶಾ ಇಂಟರ್​ನ್ಯಾಷನಲ್ ಸ್ಕೂಲ್

ಶಿಗ್ಗಾಂವಿ: ಸರ್ಕಾರದ ಶಿಕ್ಷಣ ವ್ಯವಸ್ಥೆಯ ಜತೆಗೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಮಾಡಬೇಕಾದ ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ಕೆಲವರ ದೃಷ್ಟಿಯಲ್ಲಿ ಖಾಸಗಿ ಶಾಲೆಗಳು ಎಂದರೆ ಬರೀ ಆಡಂಬರ, ವಿಪರೀತ ಶುಲ್ಕ ಎಂಬ ಮಾತು ಸಾಮಾನ್ಯ. ಆದರೆ, ಪಟ್ಟಣದ ದಿಶಾ ಇಂಟರ್​ನ್ಯಾಷನಲ್ ಶಿಕ್ಷಣ ಸಂಸ್ಥೆಯು, ತಮ್ಮ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡುತ್ತಿದೆ. ಸಂಸ್ಥೆಯು ಶಿಕ್ಷಣ ಕಾಳಜಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಸಾರಥ್ಯದ ಪಟ್ಟಣದ ದಿಶಾ ಇಂಟರ್ ನ್ಯಾಷನಲ್ ಶಾಲೆ ಪ್ರತಿ ವರ್ಷ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿಯುವ ಮೂಲಕ ಶಾಲೆಯ ನವೀಕರಣ, ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಆವರಣಗಳಲ್ಲಿ ಗಿಡ ನೆಡುವುದು, ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ನೋಟ್​ಬುಕ್, ಪೆನ್ನು, ಪೆನ್ಸಿಲ್ ಇತ್ಯಾದಿಗಳನ್ನು ಉಚಿತವಾಗಿ ನೀಡುತ್ತಿದೆ.

ಪ್ರಸ್ತುತ ವರ್ಷ ಸ್ವಚ್ಛತಾ ಸಪ್ತಾಹದ ಅಂಗವಾಗಿ ಶನಿವಾರ ತಾಲೂಕಿನ ಹಿರೇಮಲ್ಲೂರು ಪ್ಲಾಟ್ ಗ್ರಾಮದಲ್ಲಿರುವ ಡಿಪಿಇಪಿ ಕನ್ನಡ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಆವರಣದ ಸ್ವಚ್ಛತೆ ಮತ್ತು ಕಟ್ಟಡಕ್ಕೆ ಬಣ್ಣ ಹಚ್ಚುವ ಮೂಲಕ ಪರಿಸರ ರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಮಕ್ಕಳಿಗೆ ಪೆನ್ನು, ಪುಸ್ತಕಗಳು, ಸ್ಯಾನಿಟೈಸರ್ ಸೇರಿದಂತೆ ಇತರ ಪರಿಕರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ, ಶ್ರೀದೇವಿ ಗಣಾಚಾರಿ, ಶಶಾಂಕ ಕೌಜಲಗಿ, ಮಹೇಶ ಯಲಿಗಾರ, ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ಸ್ಥಳೀಯ ಗ್ರಾಪಂ ಸದಸ್ಯರು, ಗ್ರಾಮಸ್ಥರು ಶಾಲೆಯ ಸ್ವಚ್ಛತಾ ಸಪ್ತಾಹದಲ್ಲಿ ಭಾಗಿಯಾಗಿದ್ದರು.

ಪಟ್ಟಣದ ದಿಶಾ ಇಂಟರ್್ ನ್ಯಾಷನಲ್ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳ ಶೈಕ್ಷಣಿಕ ಕಾಳಜಿ ವಹಿಸುತ್ತಿರುವುದು ಸ್ಮರಣೀಯ. ಪ್ರತಿ ವರ್ಷ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಕಟ್ಟಡವನ್ನು ನವೀಕರಿಸುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಅವರ ಕಾರ್ಯಕ್ರಮಗಳು ಶಿಕ್ಷಣ ಕ್ರಾಂತಿಗೆ ಕನ್ನಡಿಯಾಗಿದೆ. | ಎಂ.ಬಿ. ಅಂಬಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ