ಮಂಡ್ಯ: ಜಿಲ್ಲೆಯ ನಿರುದ್ಯೋಗಿಗಳಿಗೆ ತರಬೇತಿ ನೀಡುವ ಮೂಲಕ ಅವರು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿ. ಈ ಮೂಲಕ ಮಾದರಿ ಜಿಲ್ಲೆಯನ್ನಾಗಿ ಮಾಡಲು ಚಿಂತನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಮಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪುರಸ್ಕೃತವಾಗಿ 594 ಯೋಜನೆ ಜಾರಿಯಲ್ಲಿವೆ. ಆದರೆ ಈ ಬಗ್ಗೆ ಎಷ್ಟೋ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗೆ ಸಾಲ ಸೌಲಭ್ಯ ಸಿಗುತ್ತದೆ. ಆದ್ದರಿಂದ ಇವುಗಳನ್ನು ಅನುಷ್ಠಾನ ಮಾಡುವುದು ಅಧಿಕಾರಿಗಳ ಹೊಣೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಗುರಿ ಮೀರಿದ ಸಾಧನೆ ಮಾಡಬೇಕು ಎಂದರು.
ಮಂಡ್ಯ ಜಿಲ್ಲೆ ನಿರೀಕ್ಷೆಯಷ್ಟು ಅಭಿವೃದ್ಧಿಯಾಗಿಲ್ಲ. ಹೊರಗಿನಿಂದ ಕಾಣುವಷ್ಟು ಸಮೃದ್ಧಿಯಾಗಿಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಾಗದೇ ಹಿಂದುಳಿದಿದೆ. ಆದ್ದರಿಂದ ಬದಲಾವಣೆ ಮಾಡೋಣ. ಬಡ್ಡಿರಹಿತ ಸಾಲ ನೀಡುವ ಕಾರ್ಯಕ್ರಮಗಳಿವೆ. ಈ ಎಲ್ಲವನ್ನು ಬಳಸಿಕೊಂಡು ಆರ್ಥಿಕ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ತರೋಣ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅಧಿಕಾರಿಗಳ ಸಭೆ ನಡೆಸಿ 594 ಕಾರ್ಯಕ್ರಮದ ಪೈಕಿ ಎಷ್ಟನ್ನು ಅನುಷ್ಠಾನಗೊಳಿಸಬಹುದೆಂದು ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿ. ಅಭಿವೃದ್ಧಿಗಾಗಿ ನನ್ನೊಂದಿಗೆ ಕೈಜೋಡಿಸಿ ಎಂದು ಹೇಳಿದರು.
ಇನ್ನು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆ ಉದ್ಘಾಟನೆ ನೀವೆ ಮಾಡಿಕೊಳ್ಳಿ. ಆದರೆ ಕೇಂದ್ರ ಪುರಸ್ಕೃತ ಕಾರ್ಯಕ್ರಮ ಅನುಷ್ಠಾನ ಮಾಡುವಾಗ ಸೌಜನ್ಯಕ್ಕಾದರೂ ನನ್ನನ್ನು ಕೇಳುತ್ತಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ನನ್ನ ಹೆಸರಿನ ಕಲ್ಲು ಹಾಕಬೇಕೆಂಬ ಆಸೆ ನನಗಿಲ್ಲ. ಆದರೆ ಜನರ ಭಾವನೆ ಬೇರೆಯಾಗಿರುತ್ತದೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ಸರಿಯಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.