ಸಿರಗುಪ್ಪ: ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಘೆ, ಚಿಕುನ್‌ಗುನ್ಯಾ, ಮಿದುಳು ಜ್ವರ ಹಾಗೂ ಆನೇ ಕಾಲುರೋಗಗಳಿಂದ ಮುಕ್ತರಾಗಲು ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾಹ ಹೇಳಿದರು.
ನಗರದ ಒಂದನೇ ವಾರ್ಡ್‌ನಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿ ನಗರದಾದ್ಯಂತ ಲಾರ್ವಾ ತಾಣಗಳ ಸಮೀಕ್ಷೆ ನಡೆಸಿ ಮಾತನಾಡಿದರು.
ಇದನ್ನು ಓದಿ: ರಾಜ್ಯದಲ್ಲಿ ಏಳು ದಿನಗಳಲ್ಲಿ 150 ಡೆಂಘೆ ಪ್ರಕರಣಗಳು ದೃಢ
ರೋಗಗಳು ಬಂದ ನಂತರ ವೈದ್ಯರು ನಿಯಂತ್ರಿಸಬಹುದು. ಆದರೆ ನಾವು ರೋಗಗಳೇ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುದು ಬಹುಮುಖ್ಯವಾಗಿದೆ.
ಪ್ರತಿಯೊಬ್ಬರೂ ಮನೆಯ ಸುತ್ತಲಿನ ಪರಿಸರದಲ್ಲಿ ಅತಿ ಹೆಚ್ಚು ದಿನ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಿ ಪರಿಸರವನ್ನು ಶುದ್ಧ ಮತ್ತು ಸ್ವಚ್ಛವಾಗಿಡಬೇಕು. ಸುತ್ತಲಿನ ಪರಿಸರವೇ ಆರೋಗ್ಯದ ಗುಟ್ಟಾಗಿದೆ. ಉತ್ತಮ ಪರಿಸರವಿದ್ದಲ್ಲಿ ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.
ನಗರದ ವಿವಿಧ ವಾರ್ಡ್‌ಗಳಿಗೆ ತೆರಳಿ ಸಾರ್ವನಿಕರು ನೀರು ಸಂಗ್ರಹಿಸುವ ತೊಟ್ಟಿ, ಡ್ರಮ್, ಚರಂಡಿಗಳನ್ನು ಪರಿಶೀಲಿಸಿದರು. ನಂತರ ಡೆಂಘೆ ಜ್ವರದ ಲಕ್ಷಣಗಳು, ವಿಧಗಳು ಹಾಗೂ ಪರಿಣಾಮ, ಸೊಳ್ಳೆಗಳ ಜೀವನ ಚಕ್ರ ಕುರಿತು ಚಿತ್ರಗಳ ಮುಖಾಂತರ ಪ್ರಾತ್ಯಕ್ಷಿಕೆ ನೀಡಿದರು.