ಉಪ್ಪಿನಬೆಟಗೇರಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಂಗೊಳಿಸುತ್ತಿರುವ ಮುಂಗಾರು ಹಂಗಾಮಿನ ಬೆಳೆಗಳಿಗೆ ಕೀಟ ಹಾಗೂ ರೋಗ ಬಾಧೆ ಆವರಿಸುತ್ತಿದ್ದು, ಇಳುವರಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ.
ಕಳೆದ ವರ್ಷ ಧಾರವಾಡ ತಾಲೂಕಿನಲ್ಲಿ ಸೋಯಾಬೀನ್, ಹೆಸರು, ಉದ್ದು ಬಿತ್ತನೆ ಮಾಡಿದ್ದ ರೈತರು, ಆರಂಭದಲ್ಲಿ ಉತ್ತಮ ಮಳೆಯಾಗಿ ನಂತರ ಕೊರತೆಯ ಪರಿಣಾಮ ಹಸಿರು ಬರ ಆವರಿಸಿದ್ದರಿಂದ ಕೈ ಸುಟ್ಟುಕೊಂಡಿದ್ದರು. ಈ ಬಾರಿ ಮುಂಗಾರು ಅತ್ಯುತ್ತಮವಾಗಿದ್ದು ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಹೆಸರು, ಉದ್ದು ಮತ್ತು ಸೋಯಾಬೀನ್ ಬಿತ್ತನೆ ಮಾಡಲಾಗಿದೆ.
ಅಮ್ಮಿನಬಾವಿ ಹೋಬಳಿಯಲ್ಲಿ ಹೆಸರು- 10300 ಹೆಕ್ಟೇರ್, ಉದ್ದು-9310, ಹೆಕ್ಟೇರ್, ಶೆಂಗಾ- 750 ಹೆಕ್ಟೇರ್, ಸೋಯಾಬೀನ್-2510 ಹೆಕ್ಟೇರ್, ಗೋವಿನಜೋಳ-215 ಹೆಕ್ಟೇರ್, ತೊಗರಿ-20 ಹೆಕ್ಟೇರ್, ಹತ್ತಿ-2140 ಹೆಕ್ಟೇರ್, ಕಬ್ಬು-150 ಹೆಕ್ಟೇರ್ ಸೇರಿದಂತೆ ಒಟ್ಟು 25,393 ಕ್ಷೇತ್ರದಲ್ಲಿ ಬಿತ್ತನೆಯಾಗಿದೆ.
ಗರಗ ಹೋಬಳಿಯಲ್ಲಿ ಸೋಯಾಬೀನ್-9650 ಹೆಕ್ಟೇರ್, ಉದ್ದು-553, ಹೆಕ್ಟೇರ್, ಶೆಂಗಾ- 355 ಹೆ., ಕಬ್ಬು-1125 ಹೆ., ಗೋವಿನಜೋಳ-3250 ಹೆ., ತೊಗರಿ-52 ಹೆ., ಹತ್ತಿ-683 ಹೆ., ಹೆಸರು-465 ಹೆ., ಭತ್ತ-308 ಹೆ., ಜೋಳ-5 ಹೆ., ರಾಗಿ-2 ಹೆ., ಸಿರಿಧಾನ್ಯ-2 ಹೆ., ಅಲಸಂದಿ 2 ಹೆಕ್ಟೇರ್ ಸೇರಿದಂತೆ ಒಟ್ಟು 16452 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ.
ಸೋಯಾಬೀನ್, ಹೆಸರು ಹಾಗೂ ಉದ್ದಿನ ಬೆಳೆ ಹುಲುಸಾಗಿ ಬೆಳೆದಿವೆ. ಅಮ್ಮಿನಬಾವಿ, ಗರಗ ಹೋಬಳಿ ಮಟ್ಟದ ಹಲವೆಡೆ ಹೆಸರು, ಸೋಯಾಬೀನ್, ಉದ್ದು ಬೆಳೆಯಲ್ಲಿ ತುಕ್ಕು (ತಾಮ್ರ) ರೋಗ ಕಾಣಿಸಿಕೊಂಡಿದೆ. ಎಲೆಗಳ ಕೆಳಭಾಗದಲ್ಲಿ ಕಂದು ಬಣ್ಣದ ಚುಕ್ಕೆಯ ಲಕ್ಷಣಗಳು ಕಂಡುಬಂದಿದ್ದು, ನಂತರ ಎಲೆಯ ಎಲ್ಲ ಭಾಗ ಆವರಿಸಿ ಸುಟ್ಟಂತಾಗುತ್ತಿವೆ.
ಮುಂಗಾರಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗಿದ್ದು ಶೇ. 97ರಷ್ಟು ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಕೆಲವೆಡೆ ರೋಗ, ಕೀಟಬಾಧೆ ಕಂಡುಬಂದಿದೆ. ಉದ್ದಿನ ಬೆಳೆಗೆ ಸಸ್ಯ ಹೇನು ಕೀಟಗಳ ಕಾಟ ಶುರುವಾಗಿದ್ದು, ಚಿಗುರು ಎಲೆ ಮತ್ತು ಕಾಯಿಗಳಿಂದ ರಸ ಹೀರುತ್ತಿವೆ. ಅವುಗಳ ಹತೋಟಿಗೆ 1ಮಿ. ಲೀಟರ್ ಮಿಥೈಲ್ ಪ್ಯಾರಾಥಿಯನ್ 50 ಇಸಿ, ಅಥವಾ 1ಮಿ.ಲೀ ಮೊನೋಕ್ರೊಟೊಪಾಸ್ 36 ಎಸ್‌ಎಲ್, 1.7 ಮಿ.ಲೀ ಡೈಮಿಥೋಯಟ್ 30 ಇಸಿ ಬೆರೆಸಿ ಸಿಂಪಡಿಸಲು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕೆಲ ಗಿಡಗಳಿಗೆ ರಸ್ಟ್ ರೋಗ ಕಂಡುಬಂದಿದ್ದು, ಅಂತಹವುಗಳು ನಿಯಂತ್ರಣಕ್ಕೆ ಬಾರದಿದ್ದರೆ ಗಿಡಗಳನ್ನು ಹೊಲದಿಂದ ಕಿತ್ತು ಎಸೆಯಬೇಕು ಇಲ್ಲವೇ ಸುಟ್ಟು ನಾಶಪಡಿಸಿದರೆ, ಉಳಿದ ಗಿಡಗಳು ಉತ್ತಮ ಕಾಯಿ ಹಾಗೂ ಕಾಳು ಕಟ್ಟುತ್ತವೆ ಎಂದು ಸಲಹೆ ನೀಡಿದ್ದಾರೆ. ರೈತರು ಬೆಳೆ ರಕ್ಷಿಸಿಕೊಳ್ಳಲು ಅಗ್ರೋ ಕೇಂದ್ರಗಳಿಗೆ ದೌಡಾಯಿಸಿ ಕೀಟನಾಶಕ ಖರೀದಿಯಲ್ಲಿ ನಿರತರಾಗಿದ್ದಾರೆ.
ನಿರಂತರ ಮಳೆಯಿಂದ ಬೆಳೆಯಲ್ಲಿ ನೀರು ನಿಂತಿದ್ದರೆ, ಅದನ್ನು ಚಿಕ್ಕ ಕಾಲುವೆ ಮೂಲಕ ಹೊರ ಹಾಕಬೇಕು. ಸೋಯಾಬೀನ್, ಹೆಸರು ಹಾಗೂ ಉದ್ದಿನ ಬೆಳೆಯಲ್ಲಿ ತಾಮ್ರರೋಗ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಹೆಕ್ಸಾಕೊನಜೋಲ್ ಅಥವಾ ಪ್ರೋಪಿಕೋನೋಜೋಲ್ ಅಥವಾ ಟೆಬುಕೋನೋಜೋಲ್ 1ಮಿ.ಲೀ + ಎನ್‌ಪಿಕೆ 19:19:19 10ಗ್ರಾಂ ಬೆರೆಸಿ ಬೆಳೆಗೆ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರಲಿದೆ. ರಾಜಶೇಖರ ಅಣಗೌಡರ, ಸಹಾಯಕ ಕೃಷಿ ನಿರ್ದೇಶಕ ಧಾರವಾಡ