ಗಂಗೊಳ್ಳಿ ಬಂದರು ಪ್ರದೇಶದ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿರುವುದು ಮತ್ತು ನೀರಿನಲ್ಲಿ ತ್ಯಾಜ್ಯ ತುಂಬಿರುವುದು 
ಜಿಲ್ಲೆ

ಬಂದರು ಪರಿಸರದಲ್ಲಿ ರೋಗ ಭೀತಿ

ಇಂದಿರಾ ಎನ್ ಕೆ

ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಮೀನುಗಾರಿಕೆ ಬಂದರು ಪ್ರದೇಶವಾದ ಗಂಗೊಳ್ಳಿ ಮೀನುಗಾರಿಕೆ ಬಂದರು ಪರಿಸರದ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿದ್ದು, ನಿಂತ ನೀರಿನಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು ಕೊಳೆತು ನಾರುತ್ತಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ಬಂದರಿನ ವಾಹನ ನಿಲುಗಡೆ ಮತ್ತು ಮೀನುಗಾರಿಕೆ ಚಟುವಟಿಕೆ ನಡೆಸುವ ಸ್ಥಳ ಸ್ವಚ್ಛಗೊಳಿಸಿದ ನೀರು ಚರಂಡಿಗಳಲ್ಲಿ ಹಾಗೇ ನಿಂತಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ. ಬಂದರು ಪ್ರದೇಶದಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದ್ದು, ನೀರು ಹರಿದು ಹೋಗುವ ಚರಂಡಿಯಲ್ಲಿ ತ್ಯಾಜ್ಯಗಳ ದುರ್ನಾತ ಬೀರುತ್ತಿದೆ. ಸುತ್ತಮುತ್ತಲಿನ ಮನೆಗಳಲ್ಲಿ ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಹಾವಳಿ ವ್ಯಾಪಕವಾಗಿದ್ದು ಮಲೇರಿಯಾ, ಪೈಲೇರಿಯಾ, ಡೆಂೆ ಮತ್ತಿತರ ರೋಗಗಳು ಹರಡುವ ಭೀತಿ ಜನರನ್ನು ಕಾಡಲಾರಂಭಿಸಿದೆ. ಆದರೆ ಬಂದರು ಇಲಾಖೆ ದಿವ್ಯ ಮೌನ ವಹಿಸಿದೆ.

ಪ್ರತಿವರ್ಷ ಸಾವಿರಾರು ರೂ. ತೆರಿಗೆ ವಸೂಲಿ ಮಾಡುತ್ತಿರುವ ಬಂದರು ಇಲಾಖೆ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಯಾವುದೇ ಕ್ರಮಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಣಾಂತಿಕ ಕಾಯಿಲೆಗಳು ಉಲ್ಭಣಿಸುತ್ತಿದ್ದು ಸಂಬಂಧಪಟ್ಟ ಇಲಾಖೆ ಸ್ವಚ್ಛತೆಗೆ ಕ್ರಮಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯ ಮೀನುಗಾರರಿಂದ ಕೇಳಿ ಬರುತ್ತಿದೆ ಪ್ರತಿನಿತ್ಯ ಹೆಚ್ಚುತ್ತಿರುವ ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ಮೀನುಗಾರರು ಭಯಭೀತರಾಗಿದ್ದಾರೆ.

ಬಂದರು ಪ್ರದೇಶದ ಸ್ವಚ್ಛತೆ ಗುತ್ತಿಗೆ ಪಡೆದುಕೊಂಡವರು ಸ್ವಚ್ಛತೆ ಬಗ್ಗೆ ಗಮನಹರಿಸದಿರುವುದು ಮತ್ತು ಪರಿಸರದ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದರು ಪ್ರದೇಶದ ಸ್ವಚ್ಛತೆ ಕಡೆ ಗಮನಹರಿಸಬೇಕಿದೆ.

ಗಂಗೊಳ್ಳಿ ಮೀನುಗಾರಿಕೆ ಪ್ರದೇಶದಲ್ಲಿ ನಿಂತ ನೀರಿನಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು ಕೊಳಚೆ ನೀರಿನಿಂದ ದುರ್ನಾತ ಬೀರುತ್ತಿದೆ. ಇದರಿಂದ ಪರಿಸರದ ಜನರ ಆರೋಗ್ಯ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ಬಂದರು ಪ್ರದೇಶದಲ್ಲಿ ಶುಚಿತ್ವ ಕಾಪಾಡಲು ಕೂಡಲೇ ಕ್ರಮಕೈಗೊಳ್ಳಬೇಕು.-ಗುರು, ಸ್ಥಳೀಯ ಮೀನುಗಾರ