ಉಪ್ಪಿನಬೆಟಗೇರಿ: ಬಿಜಿಡಿ.111-1 ತಳಿಯ ಕಡಲೆ ಬೀಜಕ್ಕೆ ಸಿಡಿರೋಗ ನಿರೋಧಕ ಶಕ್ತಿ ಹೆಚ್ಚಿದೆ. ಅಲ್ಲದೆ, ರೋಗ ತಡೆಗಟ್ಟಲು ಬೆಳೆ ಪರಿವರ್ತನೆ ಕೂಡ ಅತಿ ಮುಖ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಬಸವರಾಜ ಏಣಗಿ ಹೇಳಿದರು.
ಸಮೀಪದ ಕಲ್ಲೆ ಗ್ರಾಮದ ಹೊಲವೊಂದರಲ್ಲಿ ಕೃಷಿ ಇಲಾಖೆ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಜರುಗಿದ ಕಡಲೆ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
‘ಪ್ರತಿವರ್ಷ ದ್ವಿದಳ ದಾನ್ಯ ಬೆಳೆಯುವುದರಿಂದ ಸಿಡಿರೋಗ ಹತೋಟಿಗೆ ತರಲು ಕಷ್ಟವಾಗುತ್ತದೆ. ಬೆಳೆ ಪರಿವರ್ತನೆ ಅವಶ್ಯವಾಗಿ ಮಾಡಬೇಕು. ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದರೆ ಸಿಡಿ ರೋಗವನ್ನು ಹತೋಟಿಗೆ ತರಬಹುದು. ಕಡಲೆ ಬೀಜವನ್ನು ಬೀಜೋಪಚಾರ ಮಾಡುವುದುದರಿಂದ ಸ್ವಲ್ಪ ಮಟ್ಟಿಗೆ ಈ ರೋಗವನ್ನು ನಿಯಂತ್ರಿಸಬಹುದು’ ಎಂದರು.
ಧಾಮುಲ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಉಪ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ್, ಕೃಷಿ ಅಧಿಕಾರಿಗಳಾದ ರೇಖಾ ಬೆಳ್ಳಟ್ಟಿ, ಎಂ.ಎಸ್. ಲಕ್ಕಮ್ಮನವರ, ರೈತ ಸಿದ್ದನಗೌಡ ಶಿವನಗೌಡರ, ಬಾಪುಗೌಡ ಶಿವನಗೌಡರ, ಮಲ್ಲೇಶಪ್ಪ ಕರಿಕಟ್ಟಿ, ವಿಠ್ಠಲ ಧಾರವಾಡ, ಅರುಣ ವಗೆಣ್ಣವರ ಇತರರಿದ್ದರು.