ಮೈಸೂರು: ಜೀತಮುಕ್ತರಿಗೆ ಪುರ್ನವಸತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶೀಘ್ರ ಸಭೆ ಆಯೋಜಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಜೀವಿಕ-ಜೀತ ವಿಮುಕ್ತಿ ಕರ್ನಾಟಕ, ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಹಾಗೂ ಒಕ್ಕೂಟದ ಚುನಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ಅಂಕಿ-ಅಂಶದ ಪ್ರಕಾರ ರಾಜ್ಯದಲ್ಲಿ 20 ಸಾವಿರ ಜನ ಜೀತಪದ್ಧತಿಯಿಂದ ಮುಕ್ತರಾಗಿದ್ದಾರೆ. ದೇವದಾಸಿ ಪದ್ಧತಿಯಲ್ಲಿ 40 ರಿಂದ 50 ಸಾವಿರ, ಸಫಾಯಿ ಕರ್ಮಚಾರಿಗಳು 30 ಸಾವಿರ ಮತ್ತು ಮ್ಯಾನುವಲ್ ಸ್ಕಾೃವೆಂಜರ್ಸ್ 7 ಸಾವಿರ ಜನ ಇದ್ದಾರೆ ಎನ್ನುವ ಮಾಹಿತಿ ಇದೆ ಎಂದರು.
ಜೀತಪದ್ಧತಿ, ದೇವದಾಸಿ ಪದ್ಧತಿ, ಮಲಹೊರುವ ಪದ್ಧತಿಯಿಂದ ಇವರೆಲ್ಲ ಮುಕ್ತರಾಗಿದ್ದರೂ, ಸೂಕ್ತ ಪುರ್ನವಸತಿ ಕಲ್ಪಿಸಲು ಕೆಲ ತೊಡಕುಗಳು ಉಂಟಾಗಿದೆ. ಈ ತೊಡಕು ನಿವಾರಣೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ಆಯೋಜಿಸಲಾಗುವುದು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀತ ಪದ್ಧತಿ ಎನ್ನವುದು ಅಸ್ಪಶ್ಯತೆ ಮತ್ತು ಜಾತಿಯತೆಯ ಆಚರಣೆಯ ಒಂದು ಭಾಗವಾಗಿದ್ದು, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಪ್ರತಿಪಾದಿಸಿದ್ದರು. ಚೀನಾ, ರಷ್ಯಾ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಇದ್ದ ಜೀತಪದ್ಧತಿ ಭಾರತದಲ್ಲಿ ತೆಗೆದುಕೊಂಡ ಸಾಲವನ್ನು ತೀರಿಸದೆ ಇದ್ದಾಗ ಜೀವನ ಪರ್ಯಂತ ದುಡಿಸಿಕೊಳ್ಳುವುದು ಇತ್ತು ಎಂದು ಹೇಳಿದರು.
ಈ ಪದ್ಧತಿ ತಲೆಮಾರಿನಿಂದ ತಲೆಮಾರಿಗೂ ನಡೆದು ಬಂದಿತ್ತು. ಇಂತಹ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸಲುವಾಗಿ 1976ರಲ್ಲಿ ಇಂದಿರಾಗಾಂಧಿ ಅವರು ಉಳುವವನೆ ಭೂಮಿಯ ಒಡೆಯ, ಸಾಲ, ಜೀತಪದ್ಧತಿ ನಿರ್ಮೂಲನೆಯಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡು ಜಾತಿ, ಹಣ ಬಲ ಇದ್ದವರ ಕಪಿಮುಷ್ಟಿಯಲ್ಲಿ ಸಿಲುಕಿ ಇಡೀ ಜೀವನವನ್ನು ಗುಲಾಮಗಿರಿಯಿಂದ ಇದ್ದವರನ್ನು ವಿಮೋಚನೆ ಗೊಳಿಸಿದರು ಎಂದು ಹೇಳಿದರು.
ಡಿ.ದೇವರಾಜ ಅರಸು ಅವರು ಇಂದಿರಾಗಾಂಧಿ ಅವರು ತಂದಂತಹ ಕಾನೂನುಗಳನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೆ ತಂದು, ಸಾವಿರಾರು ಜನರಿಗೆ ದಾರಿದೀಪವಾದರು ಎಂದು ಬಣ್ಣಿಸಿದರು.
ಬಲವಂತದ ಕೆಲಸಗಳನ್ನು ಮಾಡಲು ಹಾಗೂ ವ್ಯಕ್ತಿಗತವಾದ ಗೌರವಕ್ಕೆ ಧಕ್ಕೆ ತರಲು ಅವಕಾಶವಿಲ್ಲ ಎಂದು ಸಂವಿಧಾನ ಹೇಳುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಶೋಷಿತರು, ತುಳಿತಕ್ಕೆ ಒಳಗಾದವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಇಂತಹ ಆದ್ಯತಾ ವಲಯಗಳನ್ನು ಗುರುತಿಸಿ ಪರಿಹಾರ ಕೊಡಬೇಕು. ಇವರಿಗೆ ಪುನರ್ವಸತಿ ಕೆಲಸವಾಗಲೇಬೇಕಿದೆ ಎಂದರು.
ರಾಜ್ಯದಲ್ಲಿ ಇಂದು ಮಾಸಿಕ ನಿರ್ದಿಷ್ಟ ಆದಾಯ ಇಲ್ಲದೆ ಯಾರು ಬದುಕುತ್ತಿಲ್ಲ. ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮೇಲೆ ಯಾರೂ ಕೂಡ ನಮಗೆ ಆದಾಯ ಇಲ್ಲ ಎಂದು ಹೇಳುತ್ತಿಲ್ಲ. ರಾಜ್ಯ ಸರ್ಕಾರದಿಂದ ಬರುತ್ತಿರುವ ಸಹಾಯದಿಂದ ಗೌರವಯುತವಾಗಿ ಹಾಗೂ ಸ್ವಾಭಿಮಾನದಿಂದ ಬದುಕಬಹುದು ಎಂದು ಹೇಳಿದರು.
ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ ಅದನ್ನು ಕುಡಿದವನು ಘರ್ಜಿಸಲೇ ಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ನಮ್ಮ ಮಕ್ಕಳನ್ನು ಶಿಕ್ಷಣದ ದಿಕ್ಕಿಗೆ ಸಾಗಿಸಬೇಕು. ವರ್ಣಾಶ್ರಮ ನೀತಿಯಲ್ಲಿ ಬರುವ ಬ್ರಾಹ್ಮಣರು, ಕ್ಷತ್ರೀಯರು ಹಾಗೂ ವೈಶ್ಯರಲ್ಲಿ ಜೀತ ಮಾಡುತ್ತಿಲ್ಲ. ಹೀಗಾಗಿ ಜಾತಿ ವ್ಯವಸ್ಥೆ, ಅಸ್ಪಶ್ಯತೆ ಜೀತಪದ್ಧತಿಯ ಒಂದು ಮುಖದ ಪ್ರದರ್ಶನ. ಇದನ್ನು ಉಗ್ರವಾಗಿ ಖಂಡನೆ ಮಾಡಬೇಕು ಎಂದರು.
ಜೀವಿಕ ಸಂಸ್ಥಾಪಕ ಬೆಂಗಳೂರಿನ ಡಾ.ಕಿರಣ್ ಕಮಲ್ ಪ್ರಸಾದ್ ಮಾತನಾಡಿ, ಸದ್ಯ ಇರುವ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯಲ್ಲಿ ಪುನರ್ವಸತಿ ಕಲ್ಪಿಸಲು ತೊಡಕು ಇವೆ. ಅದನ್ನು ಸರಿ ಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಜೀತ ಮುಕ್ತ ಪ್ರಕರಣವನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಬೇಕು ಎನ್ನುವ ಷರತ್ತಿನಿಂದ ಜೀತಮುಕ್ತರು ಪರಿಹಾರ ಪಡೆಯಲು ವಿಳಂಬ ಅಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿಯೇ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಜೀತ ಪದ್ಧತಿ ಇನ್ನೂ ಜೀವಂತ ಎನ್ನುವುದು ತೀರ ಆತಂಕದ ವಿಷಯ. ಹಾಗಾಗಿ ಇದರ ನಿರ್ಮೂಲನೆ ಕಠಿಣ ನಿರ್ಧಾರ ಕೈಗೊಳ್ಳಬೇಕು, ಪುನರ್ವಸತಿ, ಉಳಲು ಭೂಮಿ, ಮನೆ ನಿರ್ಮಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸುವುದಾಗಿ ಹೇಳಿದರು.
ಎಚ್.ಡಿ.ಕೋಟೆ ಸೇರಿದಂತೆ ಬಹುತೇಕ ಕಡೆ ಜೀತಮುಕ್ತರಿಗೆ ಪುನರ್ವಸತಿಗಾಗಿ ಭೂಮಿ ಲಭ್ಯವಿಲ್ಲ ಎನ್ನುವ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಹಾಗಾಗಿ ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂಮಿ ಖರೀದಿಸಿ ಹಂಚಿಕೆ ಮಾಡಬೇಕು ಎಂದು ಸಚಿವರನ್ನು ಕೋರಿದರು.
ಉರಿಲಿಂಗಿ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಬೆಂಗಳೂರು ನ್ಯಾಷನಲ್ ಕಾನೂನು ಕಾಲೇಜು ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯೂ, ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.
ಶಾಸಕ ದರ್ಶನ್ ಧ್ರುವನಾರಾಯಣ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಮಾಜಿ ಮೇಯರ್ ಪುರುಷೋತ್ತಮ್, ತುಂಬಲಾ ರಾಮಣ್ಣ, ಹೈರಿಗೆ ಶಿವರಾಜು, ರಾಮಸ್ವಾಮಿ, ಗೋವಿಂದರಾಜು, ಒಕ್ಕೂಟದ ಅಧ್ಯಕ್ಷ ಮಹದೇವು, ಮಲ್ಲಿಗಮ್ಮ, ಜಿಲ್ಲಾ ಸಂಚಾಲಕ ಬಸವರಾಜು, ತಾಲೂಕು ಅಧ್ಯಕ್ಷ ಗಣೇಶ್ ಕೆ.ಎಡತೊರೆ, ಕಾರ್ಯದರ್ಶಿ ಮಂಜು ಕೊತ್ತೇಗಾಲ, ಜಿ.ಟಿ.ಸಂಜೀವಮೂರ್ತಿ, ಶಿಡ್ಲಗಟ್ಟ ಶ್ರೀನಿವಾಸ್, ಶಿಡ್ಲಗಟ್ಟ ಸರಸಿಂಹಪ್ಪ ಜೀವಿಕ ಸಂಘಟನೆಯ ಪದಾಧಿಕಾರಿಗಳು ಇದ್ದರು.
=======
ಒಕ್ಕೂಟದ ಹಕ್ಕೊತ್ತಾಯಗಳು
ಜೀತಮುಕ್ತರಾದವರಿಗಾಗಿ ವಿವಿಧ ಬೇಡಿಗಳ ಸಲ್ಲಿಕೆ, 1976ರ ಜೀತ ಕಾನೂನು ವಿರೋಧಿಯಾದ ಹಾಗೂ 2017ರ ಕೇಂದ್ರ ಸರ್ಕಾರ ಮತ್ತು 2022ರ ಕರ್ನಾಟಕ ರಾಜ್ಯದ ಎಸ್.ಒ.ಪಿ. ತಕ್ಷಣವೇ ರದ್ದು ಮಾಡಬೇಕು. ಜೀತ ವಿಮುಕ್ತರಿಗೆ ಸಂಪೂರ್ಣ ಪುನರ್ವಸತಿ ಸೌಲಭ್ಯಗಳನ್ನು ಶೀಘ್ರದಲ್ಲೆ ಒದಗಿಸಬೇಕು.
ಎಸ್‌ಸಿ, ಎಸ್‌ಟಿಗಳಿಗೆ ಅನ್ವಯವಾಗುವ ಎಸ್‌ಸಿಪಿ ಕಾನೂನಿನಡಿ ಜೀವಿತದಿಂದ ಬಿಡುಗಡೆಗೊಂಡ 7ಸಾವಿರ ಮಂದಿ ಜೀತವಿಮುಕ್ತರಿಗೆ 500 ಕೋಟಿ ರೂ.ಗಳ ವಿಶೇಷ ಪುನರ್ವಸತಿ ಪ್ಯಾಕೇಜ್ ಅನ್ನು ಮಂಜೂರು ಮಾಡಬೇಕು. ಜೀವ ವಿಮುಕ್ತರಿಗೆ ಕಡ್ಡಾಯವಾಗಿ 5 ಎಕರೆ ಜಮೀನು ಮತ್ತು ನಿವೇಶನ/ಮನೆಗಳು ಮಂಜೂರು ಮಾಡಬೇಕು. ಜೀತ ಮುಕ್ತ ಮಹಿಳೆಯರ ಸ್ವ-ಸಹಾಯಕ ಸಂಘಗಳಿಗೆ ಮಹಿಳೆಯರಿಗೆ ನೇರವಾಗಿ ಸಾಲ ಸೌಲಭ್ಯಗಳನ್ನು ಕೂಡಬೇಕು.
ಜೀತಮುಕ್ತರು ಮತ್ತು ಕೃಷಿ ಕಾರ್ಮಿಕರು ಹಾಗೂ ಅವರ ಕುಟುಂಬದವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯ ಅಭಿವೃದ್ಧಿಗಾಗಿ ತರಬೇತಿಗಳು, ಜೀವನಾಧಾರಿತ ಕೌಶಲಗಳು ಮತ್ತು ಸ್ವಾವಲಂಬನೆ ಬದುಕಿಗಾಗಿ ಬೇಕಾಗಿರುವ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲು ಎಚ್.ಡಿ.ಕೋಟೆ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಕಟ್ಟಡ ಮತ್ತು ಕಾಂಪೌಂಡ್ ಮತ್ತು ಇತರ ಕಾಮಕಾರಿಗಳಿಗೆ 2 ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು.