ಮಂಗಳೂರು ಅಂಬೇಡ್ಕರ್ ಭವನದಲ್ಲಿ ಭಾನುವಾರ ಜರುಗಿದ ದಕ ಮತ್ತು ಉಡುಪಿ ಜಿಲ್ಲೆಗಳ ಸಮಸ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಾಸಂಗಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಎಂ.ದೇವದಾಸ್ ಮುಂತಾದವರು ಉಪಸ್ಥಿತರಿದ್ದರು.  
ಜಿಲ್ಲೆ

ಪರಿಶಿಷ್ಟರ ಬೇಡಿಕೆ ಇತ್ಯರ್ಥಕ್ಕೆ ಸಿಎಂ ಜತೆ ಚರ್ಚೆ: ಸ್ಪೀಕರ್ ಖಾದರ್ ಭರವಸೆ

ಮಂಗಳೂರು: ಪರಿಶಿಷ್ಟರಿಗೆ ಮೀಸಲಿಟ್ಟಿರುವ ಡಿಸಿ ಮನ್ನಾ ಭೂಮಿ ವಿತರಣೆ ಸಹಿತ ಕರಾವಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಷ್ಟ ಪಂಗಡಗಳ ವಿವಿಧ ಬೇಡಿಕೆಗಳ ಇತ್ಯರ್ಥ ಸಂಬಂಧಿಸಿ ಮುಖ್ಯಮಂತ್ರಿ ಹಾಗೂ ಇಲಾಖೆಗಳ ಸಚಿವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮಂಗಳೂರು ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ದ.ಕ.ಮತ್ತು ಉಡುಪಿ ಜಿಲ್ಲೆಗಳ ಸಮಸ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಾಸಂಗಮದಲ್ಲಿ ಸಂಘಟಕರ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಸ್ವೀಕರಿಸಿ ಅವರು ಮಾತನಾಡಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಸಮಾವೇಶದ ಹಕ್ಕೊತ್ತಾಯದ ಬಗ್ಗೆ ಚರ್ಚಿಸಲು ಸಚಿವರು, ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಸಮುದಾಯದ ಸಂಘಟನೆ ಪ್ರತಿನಿಧಿಗಳ ಸಭೆಯನ್ನು ಸ್ಪೀಕರ್ ಜತೆ ಸೇರಿ ಆಯೋಜಿಸುವುದಾಗಿ ಹೇಳಿದರು.

ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಎಂ.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಪ್ರಸ್ತಾವನೆಗೈದರು. ಮೂಲ್ಕಿ ಕಾರ್ನಾಡು ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ಮಂಗಳೂರು ತುಳು ಪರಿಷತ್ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕ್ಕಾಡ್, ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯೂರು, ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ ಎಸ್‌ಟಿ ಘಟಕ ಅಧ್ಯಕ್ಷ ಶೇಖರ್ ಕುಕ್ಕೇಡಿ, ನಿವೃತ್ತ ಉಪ ತಹಸೀಲ್ದಾರ್ ಚಂದ್ರ ಕುಮಾರ್ ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.

ಇಂದು ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಒಂದು ದೇಶದ ಬಹುಸಂಸ್ಕೃತಿಯ ಜನರು ಒಂದೇ ತೋಟದ ಹೂವುಗಳಂತೆ ಬದುಕುತ್ತಿದ್ದಾರೆ. ಇದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಕಾರಣ.- ಯು.ಟಿ.ಖಾದರ್ ಸ್ಪೀಕರ್