ಜಿಲ್ಲೆ

ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಆಗ್ರಹ

ಮೈಸೂರು: ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಎಸ್‌ಸಿ, ಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಆಗ್ರಹಿಸಿದರು.

ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ವತಿಯಿಂದ ನಗರದ ಜೆಎಲ್ಬಿ ರಸ್ತೆಯ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಮೇಲೆ ಸರ್ಕಾರಕ್ಕೆ ನಂಬಿಕೆ ಇದ್ದರೆ ಅಸಂವಿಧಾನಿಕವಾದ ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಹೇಳಿದರು.

ಒಳ ಮೀಸಲಾತಿ ಜಾರಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಹೀಗಾಗಿ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋ ಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಯಾಗುವುದಾದರೆ ಕಾಂತರಾಜ ಆಯೋಗದ ವರದಿ ಏತಕ್ಕೆ ಜಾರಿಯಾಗಬಾರದು? ಕಾಂತರಾಜ ಆಯೋಗದ ವರದಿ ಜಾರಿಯಾದರೆ ಪ್ರತಿಯೊಂದು ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಯ ನೈಜ ಚಿತ್ರಣ ದೊರೆಯಲಿದೆ ಎಂದರು.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಾವು ಸಾಮಾಜಿಕ ನ್ಯಾಯದ ವಿರುದ್ಧ ಇಲ್ಲ. ಆದರೆ, ಒಳ ಮೀಸಲಾತಿಯ ಹೆಸರಿನಲ್ಲಿ ನಮ್ಮ ಹಕ್ಕು ಕಸಿಯಲು ಬಂದರೆ ನಾವು ಯಾರೊಂದಿಗೂ ರಾಜಿಯಾಗುವುದಿಲ್ಲ. ಮೀಸಲಾತಿ ಕಸಿಯಲು ಯತ್ನಿಸಿದರೆ ದೇಶಾದ್ಯಂತ ದಂಗೆ ನಡೆಯುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಸೀತಾರಾಮು ಮಾತನಾಡಿ, ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶ ಇಲ್ಲದೆ ಇದ್ದರೂ ರಾಜಕೀಯ ಲಾಭಕೋಸ್ಕರ ಒಳಮೀಸಲಾತಿ ವಿಚಾರವನ್ನು ಆಗಿಂದಾಗೆ ಪ್ರಸ್ತಾಪಿಸಲಾಗುತ್ತಿದೆ. ಆ ಮೂಲಕ ಪರಿಶಿಷ್ಟ ಜಾತಿಯವರನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟ ಮಾಡದೆ ಇದ್ದರೆ ಮೀಸಲಾತಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸಿದ ಒಳ ಮೀಸಲಾತಿ ದೋಷಪೂರಿತವಾಗಿದೆ. ಸರಿಯಾಗಿ ಒಳ ಮೀಸಲಾತಿ ಹಂಚಿಕೆಯಾಗದೆ ಇದ್ದರೆ ಹಲವಾರು ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದರು.

ರಾಜ್ಯದಲ್ಲಿ ಕೊರಮ, ಕೊರಚ, ಭೋವಿ, ಲಂಬಾಣಿ ಹಾಗೂ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬಡತನ, ಅನಕ್ಷರತೆ, ನಿರುದ್ಯೋಗ, ವಲಸೆ, ದಬ್ಬಾಳಿಕೆ, ಸರ್ಕಾರಿ ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾ ದ್ದಾರೆ. ಕುಲಕಸಬುಗಳು ನಾಶವಾಗಿವೆ. ಹೀಗಾಗಿ ನಮ್ಮ ಉದ್ಯೋಗಗಳನ್ನು ನಮಗೆ ಕೊಡಿ ಎಂಬ ಅಭಿಯಾನ ನಡೆಸಬೇಕು ಎಂದು ಹೇಳಿದರು.

ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ್ ರಾಮನಗರ, ಎಂ.ಎ. ರಂಗಸ್ವಾಮಿ ಹಾಸನ, ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ ಹಾಗೂ ಇತರರು ಇದ್ದರು.