ಜಿಲ್ಲೆ

ದ್ವೇಷ ಭಾಷಣ ತಡೆಗೆ ಚರ್ಚೆ

ಬಳ್ಳಾರಿ ; ಮುಂದಿನ ಅಧಿವೇಶನದಲ್ಲಿ ಸಮಾಜದ ನೆಮ್ಮದಿ ಹಾಳು ಗೆಡವುವ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ತಡೆಗೆ ಕಾಯ್ದೆ ತರುವ ಚರ್ಚೆ ನಡೆಯುತ್ತಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.

ನಗರದ ಗಾಂಧಿಭವನದಲ್ಲಿ ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾವೇ ಮೊದಲು ಸುದ್ದಿ ಕೊಡಬೇಕು ಎನ್ನುವ ಧಾವಂತದಲ್ಲಿ ಪರಿಶೀಲನೆ ನಡೆಸದೆ ಕಾಲ್ಪನಿಕ ಬ್ರೇಕಿಂಗ್ ಸುದ್ದಿ ಕೊಟ್ಟು ಬಿಡೋದು, ಬಳಿಕ ತಮ್ಮ ಕಲ್ಪನೆಯನ್ನು ಸತ್ಯ ಮಾಡೋಕೆ ಒದ್ದಾಡೋದು ನನ್ನ ಅನುಭವಕ್ಕೆ ಬರುತ್ತಿದೆ. ಇದು ವೃತ್ತಿಪರತೆಯ ಘನತೆಯನ್ನು ಕುಂದಿಸುತ್ತದೆ ಎಂದರು.

ನಮ್ಮ ಸಂವಿಧಾನ ಪ್ರತ್ಯೇಕವಾಗಿ ಪತ್ರಿಕಾ ಸ್ವಾತಂತ್ರ್ಯ ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ. ನಾವು ಪತ್ರಿಕಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ನಮ್ಮ ಮಾಧ್ಯಮಗಳ ನೆತ್ತಿ ಮೇಲೆ ತೂಗುತ್ತಿರುವ ಕತ್ತಿಯ ಬಗ್ಗೆಯೂ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ವಿಸಿಟಿಂಗ್ ಕಾರ್ಡ್ ಪತ್ರಕರ್ತರು , ನಕಲಿ ಪತ್ರಕರ್ತರು, ಬ್ಲಾಕ್ ಮೇಲ್ ಪತ್ರಕರ್ತರ ನಡುವೆ ನೈಜ - ಪತ್ರಕರ್ತರನ್ನು ಉಳಿಸಿಕೊಳ್ಳುವುದು ಈಗಿನ ಸವಾಲಾಗಿದೆ ಎಂದರು.

ಬಳಿಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಕರ್ತರಿಗೆ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇತ್ತೀಚೆಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್‌ನಲ್ಲಿ ಗೆದ್ದ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಇದೇ ವೇಳೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ, ಸೋಮಶೇಖರ ಕೆರಗೋಡು, ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾಧ್ಯಮ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಕಾರ್ಯಕಾರಿ ಸಮಿತಿ ಸದಸ್ಯ ಎನ್. ವೀರಭದ್ರಗೌಡ, ಅಡಾಕ್ ಸಮಿತಿ ಸದಸ್ಯರಾದ ವೆಂಕೋಬಿ ಸಂಗನಕಲ್ಲು, ಕೆ.ಮಲ್ಲಯ್ಯ ಇದ್ದರು.