ಗಂಗೊಳ್ಳಿ ಬಂದರಿನ ಸರ್ವಾಂಗಿಣ ಅಭಿವೃದ್ಧಿ ಹಾಗೂ ಕುಂಠಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ನಡೆಸುವ ಸಂಬಂಧ 26 ಮೀನುಗಾರಿಕೆ ಸಂಘಟನೆಗಳ ವತಿಯಿಂದ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಕಚೇರಿಯಲ್ಲಿ ಸಭೆ ನಡೆಯಿತು.  
ಜಿಲ್ಲೆ

ಗಂಗೊಳಿಯಲ್ಲಿ ಮೀನುಗಾರಿಕೆ ಸಂಘಟನೆಗಳ ಸಭೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಇಲ್ಲಿನ ಇಪ್ಪತ್ತಾರು ಮೀನುಗಾರಿಕೆ ಸಂಘಟನೆಗಳು ಜತೆಸೇರಿ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಕಚೇರಿಯಲ್ಲಿ ಭಾನುವಾರ ಸಭೆ ನಡೆಸಿದರು. ಗಂಗೊಳ್ಳಿ ಬಂದರಿನಲ್ಲಿ ನನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸರ್ಕಾರ ಹಾಗೂ ಸಂಬಂಧಿತ ಇಲಾಖಾಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಚರ್ಚಿಸಲಾಯಿತು.

ಸರ್ಕಾರ, ಸಚಿವರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬಂದರು ಅಭಿವೃದ್ಧಿ ಹಾಗೂ ಕುಂಠುತ್ತಾ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡುವ ಉದ್ದೇಶದಿಂದ ಹೋರಾಟ ನಡೆಸಲು ಮೀನುಗಾರಿಕೆ ಸಂಘಟನೆಗಳು ಮುಂದಾಗಿದ್ದು, ಹೋರಾಟದ ರೂಪುರೇಷೆಗಳನ್ನು ರಚಿಸಲು ತೀರ್ಮಾನ ಕೈಗೊಳ್ಳಲಾಯಿತು. ಗಂಗೊಳ್ಳಿ ಮೀನುಗಾರಿಕೆ ಬಂದರಿನ 26 ಮೀನುಗಾರಿಕೆ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರ ಮುಖಂಡರು, ಮೀನುಗಾರರು ಉಪಸ್ಥಿತರಿದ್ದರು.

ಮೀನುಗಾರರ ಸಮಸ್ಯೆಗಳೇನು?

ಕಳೆದ ಕೆಲವು ವರ್ಷಗಳಿಂದ ಗಂಗೊಳ್ಳಿ ಬಂದರು ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗುತ್ತಿದ್ದು, ಮೀನುಗಾರಿಕೆ ಚಟುವಟಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಮೀನುಗಾರಿಕೆಯನ್ನೇ ಅವಲಂಬಿತರಾಗಿ ಜೀವನ ನಡೆಸುತ್ತಿರುವ ಸಾವಿರಾರು ಬಡ ಮೀನುಗಾರ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆ ಇದ್ದು, ಸುರಕ್ಷತೆಗಳು ಕಡಿಮೆಯಾಗುತ್ತಿವೆ. ಇವುಗಳು ಮೀನುಗಾರರ ಆತಂಕಕ್ಕೆ ಕಾರಣಗಳಾಗಿವೆ.