ಜಿಲ್ಲೆ

ಸಾಹಿತ್ಯೇತರರೂ ಸಮ್ಮೇಳನದ ಅಧ್ಯಕ್ಷರಾಗಲಿ: ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರೂ ಅಧ್ಯಕ್ಷರಾಗಬಹುದು ಎಂದು ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸಾಹಿತ್ಯೇತರರು ಅಧ್ಯಕ್ಷರಾಗುವ ಸಂಬಂಧ ಚರ್ಚೆ ನಡೆಯುತ್ತಿದೆ. ಕನ್ನಡಿಗರೇ ಆದ ವಿವಿಧ ಕ್ಷೇತ್ರದಲ್ಲಿ ಮುತ್ಸದ್ದಿಗಳಿದ್ದಾರೆ. ನುಡಿಜಾತ್ರೆ ಪ್ರತಿ ಕನ್ನಡಿಗನೂ ಆಚರಿಸಬೇಕಾದ ವಿಶೇಷವಾದ ಸಂಭ್ರಮ. ಸಾಹಿತಿ, ಉದ್ಯಮಿಗಳ ಜವಾಬ್ದಾರಿ, ಕನ್ನಡಿಗರಿಗೆ ಉದ್ಯೋಗ, ಕನ್ನಡ ಶಾಲೆ ಉಳಿಸಿಕೊಳ್ಳಲು, ಹೊಸ ಸಾಹಿತಿಗಳನ್ನು ಪ್ರೊತ್ಸಾಹಿಸುವುದು, ಕನ್ನಡ ಗಡಿ ಸಮಸ್ಯೆ ಬಗೆಹರಿಸುವ ನಿಟ್ಟನಲ್ಲಿ ಸಮ್ಮೇಳನ ನಡೆದು ಇತಿಹಾಸ ಸೃಷ್ಠಿಸುವಂತೆ ಮೂಡಿ ಬರಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣವನ್ನು ಮಠಗಳೇ ಪ್ರಾರಂಭಿಸಿದ್ದು, ಈ ಮಟ್ಟದ ಜ್ಞಾನ ಉತ್ಪತ್ತಿಯಾಗಲು ಮಠಗಳು ತೆರೆದ ಶೈಕ್ಷಣಿಕ ಸಂಸ್ಥೆ ಕಾರಣ. ಈ ನಿಟ್ಟಿನಲ್ಲಿ ಸಿದ್ದಗಂಗಾ, ಆದಿಚುಂಚನಗಿರಿ, ಸುತ್ತೂರು, ದುರ್ದುಂಡೇಶ್ವರ ಶ್ರೀಗಳು ಸೇರಿದಂತೆ ಅನೇಕ ಪೂಜ್ಯರು ಶಿಕ್ಷಣಕ್ಕೆ ಒತ್ತು ನೀಡದಿದ್ದರೆ, ಇಂದು ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತಿತ್ತು. ಮಠದ ಕೊಡುಗೆಯೂ ಸಾಹಿತ್ಯ ಕ್ಷೇತ್ರಕ್ಕಿದ್ದು, ಮಠಗಳ ಪೂಜ್ಯರಿಗೆ ಸಮ್ಮೇಳನಾಧ್ಯಕ್ಷರಾಗುವ ಅವಕಾಶ ದೊರೆತರೆ ನಿಜವಾಗಿಯು ಸಂತಸ ಪಡುವ ವಿಷಯ. ಸಾಹಿತ್ಯದಲ್ಲಿ ಆಸಕ್ತಿ ಇರುವ ಮಠಾಧೀಶರು, ರಾಜಕಾರಣಿಯನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನವನ್ನು ಏಕೆ ಮಾಡಬಾರದು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಉಪಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಇದ್ದರು.