ಜಿಲ್ಲೆ

ಸರ್ಕಾರದ ನೆರವು, ವಹಿವಾಟು ಹೆಚ್ಚಿಸುವ ಕುರಿತು ಚರ್ಚೆ

ಆರ್.ಕೃಷ್ಣ

ಮೈಸೂರು: ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ -‘ಇನ್ವೆಸ್ಟ್ ಕರ್ನಾಟಕ 2025’ದ ಪೂರ್ವಭಾವಿಯಾಗಿ ನಗರದಲ್ಲಿ ಉದ್ಯಮಿಗಳೊಂದಿಗೆ ಮಂಗಳವಾರ ನಗರದಲ್ಲಿ ಸಂವಾದ ಆಯೋಜಿಸಲಾಗಿತ್ತು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ಎಂಸಿಸಿಐ), ಫ್ಲಿಪ್ಕಾರ್ಟ್, ಫೆಡರಲ್ ಬ್ಯಾಂಕ್, ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಐಸಿಸಿಐ-ಫಿಕ್ಕಿ) ಕರ್ನಾಟಕ ಘಟಕದಿಂದ ಆಯೋಜಿಸಿದ್ದ ಸಂವಾದಲ್ಲಿ ಡಿಜಿಟಲೀಕರಣದ ಮೂಲಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಸನ್ನದ್ಧಗೊಳಿಸಲು ಕೈಗೊಳ್ಳಬೇಕಾದ ಕ್ರಮ, ರಾಜ್ಯ ಸರ್ಕಾರದ ನೆರವು, ವಹಿವಾಟು ಹೆಚ್ಚಿಸಲು ನೆರವಾಗುವ ಮಾರ್ಗೋಪಾಯ ಕುರಿತು ಚರ್ಚಿಸಲಾಯಿತು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಫ್ಲಿಪ್ಕಾರ್ಟ್ ಸಹ ನಿರ್ದೇಶಕ ನಿಲೇಶ್ ಕುಮಾರ್, ಫೆಡರಲ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಜೊಯಲ್ ಜಾರ್ಜ್, ನಾಸ್ಕಾಂನ ವಾಸುಕಿ ಕಶ್ಯಪ್ ಅವರು ಮಾತನಾಡಿ, ಬದಲಾಗಿರುವ ಕಾಲಘಟ್ಟದಲ್ಲಿ ಎಸ್‌ಎಂಇಗಳ ಡಿಜಿಟಲೀಕರಣ ಕುರಿತು ಅನುಭವ ಹಂಚಿಕೊಂಡರು.

ಕೈಗಾರಿಕೆಗಳ ಡಿಜಿಟಲೀಕರಣದ (ಉದ್ಯಮ 4.0) ಮಾನದಂಡಗಳನ್ನು ಸಾಧಿಸಲು ಇತ್ತೀಚಿನ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ವಿಧಾನ, ತ್ವರಿತವಾಗಿ ಬದಲಾಗುತ್ತಿರುವ ಉದ್ದಿಮೆ ಲೋಕದಲ್ಲಿ ಅಗತ್ಯವಾದ ಜ್ಞಾನ ಮತ್ತು ಸಾಧನಗಳ ನೆರವಿನಿಂದ ಸಣ್ಣ, ಅತಿಸಣ್ಣ ಉದ್ಯಮವನ್ನು ಸನ್ನದ್ಧಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲಾಯಿತು.

ಜಾಗತಿಕ ಪೂರೈಕೆದಾರರಾಗಿ ಅಭಿವೃದ್ಧಿಪಡಿಸುವ ಕಾರ್ಯತಂತ್ರ ಅಳವಡಿಕೆ, ಇ-ಕಾಮರ್ಸ್ ತಾಣಗಳ ಸಮರ್ಥ ಬಳಕೆ, ರಫ್ತು ಸಾಮರ್ಥ್ಯ ಹೆಚ್ಚಳ, ಅಗತ್ಯ ಹಣಕಾಸು ನೆರವು ಪಡೆಯುವಿಕೆ ಮತ್ತು ವಿವಿಧ ವಲಯಗಳ ಮೂಲ ಉಪಕರಣ ತಯಾರಿಕಾ ಕಂಪನಿಗಳು ಹಾಗೂ ಖರೀದಿದಾರರ ಜತೆ ಸಂಪರ್ಕ ಸಾಧಿಸಲು ಸರ್ಕಾರಿ ಅಂತರ್ಜಾಲ ಸಮರ್ಪಕ ಬಳಕೆ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.