ಜಿಲ್ಲೆ

ಡಿಸೆಂಬರ್ ಅಂತ್ಯಕ್ಕೆ ಸರ್ ಎಂವಿ ಕ್ರೀಡಾಂಗಣ ಬಳಕೆಗೆ: ಉಸ್ತುವಾರಿ ಸಚಿವರ ಸಭೆಯಲ್ಲಿ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣವನ್ನು ಉನ್ನತೀಕರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಗಣರಾಜ್ಯೋತ್ಸವವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ನಗರದ ಜಿಪಂ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, 9.98 ಕೋಟಿ ರೂ ವೆಚ್ಚದಲ್ಲಿ ಉನ್ನತೀಕರಣ ಕಾಮಗಾರಿ ನಡೆಯುತ್ತಿದ್ದು, 11 ತಿಂಗಳ ಅವಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ಇತ್ತು. ಆದರೆ ಕೆಲವು ಕಾರಣಗಳಿಂದ ಕಾಮಗಾರಿ ತಡವಾಗಿದ್ದು, ಇದೇ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, ಅತ್ಯುತ್ತಮ ದರ್ಜೆಯ ಸವಲತ್ತುಗಳನ್ನು ಕ್ರೀಡಾ ಆಸಕ್ತರಿಗೆ ನೀಡಲಾಗುವುದು. ಪ್ರೇಕ್ಷಕರ ಗ್ಯಾಲರಿಗೆ ಟೆನ್ಮೆಲ್ ರೂಫಿಂಗ್ ನಿರ್ಮಿಸುವುದು. ಒಳಾಂಗಣದ ಸುತ್ತಲೂ ಒಳಚರಂಡಿ ವ್ಯವಸ್ಥೆ, 400 ಮೀ ಮಡ್ ಟ್ರಾಕ್, ಹೊಡ್ಡು ಮಣ್ಣಿಗೆ ಪಿಚ್ಚಿಂಗ್ ಮಾಡುವುದು, ಟ್ರಸ್ ವರ್ಕ್ ಸೇರಿದಂತೆ ಕೆಲವು ಮೂಲ ಸೌಕರ್ಯಗಳ ಸೂಕ್ತ ರೀತಿಯಲ್ಲಿ ಕಲ್ಪಿಸಲಾಗುವುದು ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಕ್ರೀಡಾಂಗಣದ ಕಾಮಗಾರಿಯನ್ನು ಸಂಪೂರ್ಣವಾಗಿ ಆಗಾಗ್ಗೆ ಪರಿಶೀಲಿಸಿದ್ದೇನೆ. ಯಾವುದೇ ಲೋಪದೋಷ ಉಂಟಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕ್ರೀಡಾಂಗಣದಲ್ಲಿ ಸಧ್ಯದ ಮಟ್ಟಿಗೆ ಈಜುಕೊಳ ನಿರ್ಮಾಣ ಸಾಧ್ಯವಿಲ್ಲದ್ದರಿಂದ ಮೈಷುಗರ್ ಒಡೆತನದ ಈಜುಕೊಳಕ್ಕೆ ಕಾಯಕಲ್ಪ ಕೊಟ್ಟು ನವೀಕರಿಸಿ ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಚಿಂತಿಸಲಾಗಿವುದು ಎಂದರು.

ಜಿಲ್ಲಾಕಾರಿ ಡಾ.ಕುಮಾರ ಮಾತನಾಡಿ, ಕ್ರೀಡಾಂಗಣದ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಪಿಆರ್‌ಇಡಿ ಇಂಜಿನಿಯರ್ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗಿದೆ. ಕ್ರೀಡಾಂಗಣದ ಪೂರ್ಣ ಕಾಮಗಾರಿಯ ಟೆಂಡರ್ ಆಹ್ವಾನ ಸೇರಿದಂತೆ ಹಣ ಪಾವತಿ ರಾಜ್ಯಮಟ್ಟದಲ್ಲಿ ನಡೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ನವೀಕರಣಕ್ಕೆ ನೆರವು ಬೇಕಿದೆ: ಮಂಡ್ಯ ನಗರದ ಆರ್‌ಎಪಿಸಿಎಂಎಸ್ ಸುಪರ್ದಿಯಲ್ಲಿರುವ ನಗರದ ರೈತಸಭಾಂಗಣ ನವೀಕರಣ ವಿಚಾರ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಡಿಸಿ ಡಾ.ಕುಮಾರ ಮಾತನಾಡಿ, ರೈತಸಭಾಂಗಣ ನವೀಕರಣಕ್ಕೆ 61.50 ಲಕ್ಷ ರೂ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ. ಆರ್‌ಎಪಿಸಿಎಂ ಖಾತೆಯಲ್ಲಿ 17 ಲಕ್ಷ ರೂ ಇದೆ. ಉಳಿದ ಹಣವನ್ನು ಶಾಸಕರ ನಿಯ ಅನುದಾನ, ಇತರ ಸರ್ಕಾರಿ ಸಂಸ್ಥೆಗಳಿಂದ ಅನುದಾನ, ದಾನಿಗಳು, ಸಂಘಟನೆಗಳಿಂದ ನೆರವು ಪಡೆಯಬೇಕಿದೆ ಎಂದರು. ಸಚಿವರು ಪ್ರತಿಕ್ರಿಯಿಸಿ, ಆರ್‌ಎಪಿಸಿಎಂಎಸ್, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಇತರ ಇಲಾಖೆಗಳು, ಸಂಸ್ಥೆಗಳು ಅನುದಾನ/ನೆರವು ಪಡೆಯಲು ಕ್ರಮ ವಹಿಸಿ. ಅಂತೆಯೇ ಇಂದಿನ ಸಭೆಗೆ ಗೈರಾಗಿರುವ ಆರ್‌ಎಪಿಸಿಎಂಎಸ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟೀಸ್ ಜಾರಿ ಮಾಡಿ ಎಂದು ಸೂಚಿಸಿದರು.