ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಶೀಘ್ರ ಪಾಲಿಕೆ ರಚನೆಯಾಗುವ ಭರವಸೆ ಮೂಡಿಸಿದೆ ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ-ಅಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಮಹಾನಗರ ಪಾಲಿಕೆ ರಚನೆ ಕುರಿತು ಅಧಿವೇಶನದಲ್ಲಿ ಚರ್ಚಿಸಿದ್ದು ಒಳ್ಳೆ ಬೆಳವಣಿಗೆ. ಸದನದಲ್ಲಿ ಸ್ಥಳೀಯ ಶಾಸಕರು ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವರು ವಿವರ ಉತ್ತರ ನೀಡುವ ಮೂಲಕ ಪ್ರತ್ಯೇಕ ಪಾಲಿಕೆ ರಚನೆ ಭರವಸೆ ನೀಡಿದ್ದಾರೆ. ಅವರಿಗೆ ಅಭಿನಂದನೆ ಎಂದರು.
ಕೆಲ ವರ್ಷಗಳಿಂದ ಪ್ರತ್ಯೇಕ ಪಾಲಿಕೆಗೆ ಹೋರಾಟ ಮಾಡಲಾಗುತ್ತಿದೆ. ಸರ್ಕಾರ ಬಗ್ಗೆ ಗಮನ ವಹಿಸಿದ್ದು ಸಂತಸ ತಂದಿದೆ. ಅದಕ್ಕೆ ಸಚಿವರು, ಶಾಸಕರು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯತ್ನ ಮಾಡಿ ಶೀಘ್ರ ಪಾಲಿಕೆ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಆದರಷ್ಟೇ ಸಾಲದು. 1 ಸಾವಿರ ಕೋಟಿ ರೂ. ಅನುದಾನ ನೀಡಿ ಧಾರವಾಡ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು. ಅದಕ್ಕೂ ವೇದಿಕೆಯಿಂದ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಈಗಾಗಲೇ ಧಾರವಾಡ ನಗರಕ್ಕೆ ಅನುದಾನ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು, ಪ್ರತ್ಯೇಕ ಪಾಲಿಕೆ ರಚಿಸಿ ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು. ಬರುವ ಬಜೆಟ್‌ನಲ್ಲಿ ಸರ್ಕಾರ ಪಾಲಿಕೆ ರಚನೆ ಕುರಿತು ಘೋಷಣೆ ಮಾಡಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ವಿಠ್ಠಲ ಕಮ್ಮಾರ, ಪ್ರಧಾನ ಕಾರ್ಯದರ್ಶಿ ರವಿ ಮಾಳಗೇರ, ಸಹಕಾರ್ಯದರ್ಶಿ ವಸಂತ ಅರ್ಕಾಚಾರ, ಶಂಕರ ನೀರಾವರಿ, ಇತರರು ಇದ್ದರು.