ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರತಿ ವರ್ಷ ರಾಜ್ಯೋತ್ಸವದ ಅಂಗವಾಗಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಧೀಮಂತ ಪ್ರಶಸ್ತಿಗೆ ಆಯ್ಕೆಯಾಗುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬ ಸಲಹೆ ಕೇಳಿ ಬಂದಿದೆ.
ನವಂಬರ್ 1ರ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಕುರಿತು ಸೋಮವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. 2023ರಲ್ಲಿ 68 ಜನ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡಲಾಗಿತ್ತು.
ಸಂಖ್ಯೆ ಕಡಿಮೆಯಾದರೂ ಅಡ್ಡಿಯಿಲ್ಲ, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಬೇಕು. ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಈ ಬಾರಿ ಅರ್ಜಿ ಆಹ್ವಾನಿಸದೇ, ಆಯಾ ಇಲಾಖೆ ಅಥವಾ ಕ್ಷೇತ್ರಗಳ ಪ್ರಮುಖರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡೋಣ ಎಂದು ಒಬ್ಬರು ಹೇಳಿದರು. ಆರ್ಜಿ ಆಹ್ವಾನಿಸಿದರೆ ಎಲ್ಲ ಕ್ಷೇತ್ರಗಳ ಸಾಧಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಇನ್ನೊಬ್ಬರು ಸಲಹೆ ನೀಡಿದರು.
ಸ್ಥಳೀಯರಿಗೆ ಅವಕಾಶ
ಕಳೆದ ವರ್ಷದಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪ್ರತ್ಯೇಕವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಪಾಲಿಕೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಲು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಬೇಕು. ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ಗಳ ಧ್ವನಿವರ್ಧಕಗಳ ಮೂಲಕ ಜಿಂಗಲ್ಸ್ ಹಾಕಿ ಪ್ರಚಾರ ನಡೆಸಬೇಕು ಎಂದು ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಹೇಳಿದರು.
ಸಮಯಾವಕಾಶ ನೋಡಿಕೊಂಡು ಸೀಮಿತ ಕಲಾವಿದರಿಗೆ ಅವಕಾಶ ನೀಡಬೇಕು. ಹೆಚ್ಚು ಕಲಾವಿದರನ್ನು ಆಹ್ವಾನಿಸಿ ಸಮಯ ಸಾಲದೇ ಅವಕಾಶ ವಂಚಿತರನ್ನಾಗಿ ಮಾಡಬಾರದು. ಇದರಿಂದ ಕಲಾವಿದರಿಗೆ ನೋವಾಗುತ್ತದೆ. ಸುವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಎಐಎಂಐಎಂ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ಸಲಹೆ ನೀಡಿದರು.
ರಾಜ್ಯೋತ್ಯವ ಆಚರಣೆ ಕುರಿತು ಪಾಲಿಕೆ ಸದಸ್ಯರ ಸಲಹೆ ಪಡೆಯಲು ಇಂದು ಪೂರ್ವಭಾವಿ ಸಭೆ ನಡೆಸಿದ್ದೇವೆ. ಅ. 10ರಂದು ಕನ್ನಡ ಪರ ಸಂಘಟನೆಗಳ ಸಭೆ ಕರೆದಿದ್ದೇವೆ. ಎರಡೂ ಸಭೆಯ ಸಲಹೆ-ಸೂಚನೆಗಳನ್ನು ಸೇರಿಸಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗುವುದು. ಅ. 12ರಂದು ಪಾಲಿಕೆ ಸದಸ್ಯರನ್ನೊಳಗೊಂಡ ಮೆರವಣಿಗೆ, ಧೀಮಂತ ಸನ್ಮಾನ, ಅಲ್ಪೋಪಹಾರ, ಪ್ರಚಾರ, ಸಾಂಸ್ಕೃತಿಕ ಮತ್ತು ವೇದಿಕೆ ನಿರ್ಮಾಣ ಹಾಗೂ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಕೇಂದ್ರ ಸಮಿತಿಯನ್ನು ರಚಿಸಲಾಗುವುದು ಎಂದು ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕಾರ, ಶ್ರೀನಿವಾಸ ಬೆಳದಡಿ, ರೂಪಾ ಶೆಟ್ಟಿ, ಜ್ಯೋತಿ ಪಾಟೀಲ, ಚಂದ್ರಿಕಾ ಮೇಸ್ತ್ರಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪ ಆಯುಕ್ತ ಆನಂದ ಕಲ್ಲೊಳಿಕರ, ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಸಿಎಂಒ ಡಾ. ಶ್ರೀಧರ ದಂಡಪ್ಪನವರ, ಇತರರು ಇದ್ದರು.