ಜಿಲ್ಲೆ

ಕಾರ್ಯಕರ್ತರೊಂದಿಗೆ ಚರ್ಚಿಸಿ ಬಿಜೆಪಿಗೆ ಸೇರಲಿ

ವೀರೇಶ ಸೌದ್ರಿ

ಹಳಿಯಾಳ: ಯಾರೇ ಆದರೂ ಬಿಜೆಪಿಗೆ ಸೇರಲು ಅಭ್ಯಂತರವಿಲ್ಲ, ಪಕ್ಷ ಸಂಘಟನೆಯೇ ಮುಖ್ಯ. ಪಕ್ಷದ ನಿಯಮಾವಳಿಯಂತೆ ವಿಧಾನಸಭಾ ಕ್ಷೇತ್ರದ ಎಲ್ಲ ಮಂಡಳ ಪ್ರಮುಖರೊಂದಿಗೆ ಚರ್ಚಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಪಕ್ಷಕ್ಕೆ ಸೇರ್ಪಡೆಗೊಳ್ಳಲಿ ಎಂದು ರಾಜ್ಯ ಬಿಜೆಪಿ ಪಕ್ಷದ ಕಾರ್ಯಾಕಾರಿಣಿ ಸಮಿತಿ ಸದಸ್ಯ ಸುನೀಲ್ ಹೆಗಡೆ ಹೇಳಿದರು.

ಜೆಡಿಎಸ್ ನಾಯಕ ಎಸ್.ಎಲ್. ಘೋಟ್ನೇಕರ್ ಬಿಜೆಪಿಗೆ ಸೇರ್ಪಡೆ ಕುರಿತು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಳಿಯಾಳ , ದಾಂಡೇಲಿ, ಜೋಯಿಡಾ ತಾಲೂಕುಗಳ ವಿಧಾನಸಭಾ ಕ್ಷೇತ್ರದ ಮಂಡಲ ಪದಾಧಿಕಾರಿಗಳು ಗುರುವಾರ ಆಯೋಜಿಸಿದ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಘೋಟ್ನೇಕರ ಪಕ್ಷಕ್ಕೆ ಸೇರ್ಪಡೆಗೂ ಮೊದಲು ಸ್ಥಳೀಯ ನಾಯಕರೊಂದಿಗೆ ಪರಸ್ಪರ ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಯಮಾವಳಿಯಂತೆ ಸೇರ್ಪಡೆ ಕಾರ್ಯಕ್ರಮ ಆಗಬೇಕು ಇದು ನಮ್ಮೆಲ್ಲ ಕಾರ್ಯಕರ್ತರ ಒಕ್ಕೋರಲ ನಿರ್ಣಯವಾಗಿದೆ ಎಂದರು. ಹಳಿಯಾಳ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿಯನ್ನು ಬೂತ್ ಮಟ್ಟದಿಂದ ಕಟ್ಟಿ ಬೆಳೆಸಲಾಗಿದೆ. ಗ್ರಾಪಂ, ಪುರಸಭೆ, ನಗರಸಭೆ ಹಾಗೂ ಸೊಸೈಟಿಗಳಲ್ಲಿ ಬಿಜೆಪಿಯ ಬಾವುಟ ಹಾರಿಸಲಾಗಿದೆ. ಪಕ್ಷ ಸಂಘಟನೆಯಲ್ಲಿ ನಮ್ಮ ಕಾರ್ಯಕರ್ತರ ಶ್ರಮ ಸಾಕಷ್ಟಿದೆ. ಈಗ ಒಮ್ಮೆಲೆ ಈ ಎಲ್ಲ ಕಾರ್ಯಕರ್ತರನ್ನು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕದ್ದು ಮುಚ್ಚಿ ಪಕ್ಷದಲ್ಲಿ ಸೇರ್ಪಡೆಗೊಳ್ಳುವದಕ್ಕೆ ಏನರ್ಥವಿದೆ? ಎಂದು ಪ್ರಶ್ನಿಸಿದರು. ಪಕ್ಷದ ಸಂಘಟನೆ ಹಾಗೂ ಹಿಂದುತ್ವ ಪ್ರತಿಪಾದನೆಯ ಬಲ ಕ್ಷೇತ್ರದಲ್ಲಿ ಶಕ್ತಿಶಾಲಿಯಾಗಿದೆ. ತುಂಬಾ ಕೆಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು, ಸಾಕಷ್ಟು ಬೆವರು ಸುರಿಸಿದ್ದೇವೆ. ಎಲ್ಲ ಸಮುದಾಯದವರೊಂದಿಗೆ ಇದ್ದು ಅವರೆಲ್ಲರ ಮುಖಂಡನಾಗಿಯೇ ಇರುವಾಗ ಒಂದು ಜಾತಿಯ ನಾಯಕನಂತೆ ಬಿಂಬಿಸಿಕೊಳ್ಳಲು ಪಕ್ಷದ ಸಂಘಟನೆಯಲ್ಲಿ ಅವಕಾಶವಿಲ್ಲ ಎಂದರು. ನನಗೆ ಮುಂದೆ ಎಂಎಲ್‌ಎ ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬ ವಿಚಾರ ಈಗ ಅನಗತ್ಯ. ಕಾರ್ಯಕರ್ತರ ಸ್ವಾಭಿಮಾನ ನನಗೆ ಮುಖ್ಯ. ಆದರೆ ಈವರೆಗೆ ಘೋಟ್ನೇಕರ ಹಾಗೂ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಎಲ್ಲ ಮಂಡಲ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸದೆ ಇರುವುದು ಸರಿಯಾದ ಕ್ರಮವಲ್ಲ ಎಂದರು. ಪಕ್ಷದ ಹಳಿಯಾಳ ತಾಲೂಕು ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ದಾಂಡೇಲಿಯ ಬುದ್ಧಿವಂತ ಗೌಡ ಪಾಟೀಲ, ಜೋಯಿಡಾದ ಶಿವಾಜಿ ಗೋಸಾವಿ, ಹಳಿಯಾಳ ತಾಲೂಕು ಬಿಜೆಪಿ ಪ್ರಭಾರಿ ನಂದು ಗಾಂವ್ಕರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ಪ್ರಮುಖರಾದ ಉದಯ ಹೂಲಿ, ಯಲ್ಲಪ್ಪ ಹೊನ್ನೂಜಿ, ಸಂಗೀತಾ ಜಾವಳೇಕರ, ಶಿವಾಜಿ ಪಾಟೀಲ್ , ಅರುಣ್ ಕಾಮ್ರೆಕರ, ತಾನಾಜಿ ಪಟ್ಟೇಕರ, ಗಿರೀಶ್ ಠೊಸೂರ ಇದ್ದರು