ಶಿಕ್ಷಣ ಸಚಿವ ಮಧು ಬಂಗಾರಪ್ಪ  
ಜಿಲ್ಲೆ

ಸರ್ಕಾರಿ ಶಾಲೆಗಳ ವಿಲೀನ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ

ಶಿವಮೊಗ್ಗ: ರಾಜ್ಯದಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳು ಕಡಿಮೆ ಇರುವ ಕಡೆಗಳಲ್ಲಿ ಸರ್ಕಾರಿ ಶಾಲೆಗಳ ವಿಲೀನಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಸಂಖ್ಯೆ ಕಡಿಮೆ ಇರುವ ಕಡೆ ಶಿಕ್ಷಕರಿಗೆ ಕೆಲಸವೇ ಇಲ್ಲದಂತಾಗಿದೆ. ಮಕ್ಕಳಿಗೂ ಶಾಲಾ ವಾತಾವರಣ ಹಿತಕರವಾಗಿರುವುದಿಲ್ಲ. ಸಾರಿಗೆ ಅನುಕೂಲ ಇರುವ ಕಡೆ ಮಕ್ಕಳಿಲ್ಲದ ಶಾಲೆಗಳನ್ನು ವಿಲೀನ ಮಾಡಿದರೆ ಅನುಕೂಲವಾಗುವುದೆಂಬ ಮಾತು ಕೇಳಿಬಂದಿದ್ದು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಆದ್ಯತೆ ನೀಡಲಾಗುವುದು. ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಯಾವ ರೀತಿಯ ಶಿಕ್ಷಣ ಬೇಕೋ ಅದನ್ನು ಕೊಡುವುದು ನಮ್ಮ ಕೆಲಸ. ಯಾವುದೇ ವಿಚಾರಗಳನ್ನು ಹೇರಿಕೆ ಮಾಡುವುದು ಶಿಕ್ಷಣ ಇಲಾಖೆ ಕೆಲಸವಲ್ಲ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಆದ್ಯತೆ ನೀಡಲಾಗಿದೆ. ಪಬ್ಲಿಕ್ ಶಾಲೆಗಳನ್ನು ಹೆಚ್ಚಾಗಿ ಆರಂಭಿಸುವ ದಿಸೆಯಲ್ಲಿ ಸರ್ಕಾರ ಮುಂದಡಿ ಇಟ್ಟಿದೆ ಎಂದರು.
ರಾಜ್ಯ ಶಿಕ್ಷಣ ನೀತಿ ಜಾರಿಗೆ ತಯಾರಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ನಡೆಯುತ್ತಿದೆ. ರಾಜ್ಯ ಶಿಕ್ಷಣ ನೀತಿಯ ಜಾರಿಯೊಂದಿಗೆ ಶಿಕ್ಷಕರಿಗೆ ತರಬೇತಿ ನೀಡಲು ಆದ್ಯತೆ ನೀಡಲಾಗುವುದು. ಡಯಟ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳ ಸಮರ್ಪಕ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದರು.