ಅಣ್ಣಿಗೇರಿ: ಹಿಂದಿನ ಅವಧಿಯಲ್ಲಿ ಆಶ್ರಯ ಯೋಜನೆಯ ಪ್ಲಾಟ್ಗಳ ಹಂಚಿಕೆಯಲ್ಲಿ ತಮಗೆ ಬೇಕಾದವರನ್ನು ಆಯ್ಕೆಗೊಳಿಸಿ ತಾರತಮ್ಯ ಮಾಡಲಾಗಿದೆ. ಮನೆ, ಹೊಲ ಮತ್ತು ಸರ್ಕಾರದ ಆಶ್ರಯ ಯೋಜನೆಯಲ್ಲಿ ಪ್ಲಾಟ್ ಪಡೆದುಕೊಂಡವರಿಗೇ ಮತ್ತೆ ನೀಡಲಾಗಿದೆ ಎಂದು ಅಣ್ಣಿಗೇರಿ ಪುರಸಭೆ ಆಶ್ರಯ ಸಮಿತಿ ಸದಸ್ಯ ಶಿವಯೋಗಿ ಸುರಕೋಡ ಆರೋಪಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಟ್ಟಣದ ಬೆಂತೂರ ರಸ್ತೆಯ ಆಶ್ರಯ ಕಾಲನಿ ಪರಿಶೀಲಿಸಿದಾಗ ಅವರು ಈ ವಿಷಯ ಪ್ರಸ್ತಾಪಿಸಿದರು.
18.20 ಎಕರೆ ಭೂಮಿಯಲ್ಲಿ ನಿರ್ವಿುಸಿದ ಆಶ್ರಯ ಕಾಲನಿಯಲ್ಲಿ 670 ಪ್ಲಾಟ್ಗಳಿವೆ. ಈಗ 330 ಫಲಾನುಭವಿಗಳನ್ನು ಆಯ್ಕೆಗೊಳಿಸಿದ್ದು, ಅವರ ಹೆಸರಲ್ಲಿ ಪಟ್ಟಾ ಬುಕ್ ಬಂದಿವೆ. ಇದರಲ್ಲಿ 104 ಜನರು ಈಗಾಗಲೇ ಪಟ್ಟಣದ ಬಂಗಾರಪ್ಪ ಬಡಾವಣೆ, ಅಮೃತೇಶ್ವರ ನಗರ, ಅಂಬಿಕಾ ನಗರದಲ್ಲಿ ಪ್ಲಾಟ್ ಪಡೆದವರಾಗಿದ್ದಾರೆ. ಅವರ ಹೆಸರು ತೆಗೆದು ಹಾಕಬೇಕು. ಆಸ್ತಿ-ಅಂತಸ್ತು ಇದ್ದವರಿಗೆ ಸರ್ಕಾರದ ಭೂಮಿ ಕೊಡುವುದು ಎಷ್ಟು ಸೂಕ್ತ? ಬಡವರಿಗೆ ಇಂತಹ ಸೌಲಭ್ಯಗಳು ಸಿಗಬೇಕು. ಅರ್ಹರಿಗೆ ನಿವೇಶನ ದೊರಕಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಫಲಾನುಭವಿಗಳ ಆಯ್ಕೆ ಪಟ್ಟಿ ಪರಿಶೀಲಿಸಿ, ಬಡವರಿಗೆ ನಿವೇಶನ ದೊರಕಿಸುವಂತೆ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಅವರಿಗೆ ಸೂಚಿಸಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಅಣ್ಣಿಗೇರಿ ತಹಸೀಲ್ದಾರ್ ಕೊಟ್ರೇಶ ಗಾಳಿ, ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ, ಷಣ್ಮುಖ ಗುರಿಕಾರ, ರಿಶಿ ಸಾರಂಗಿ, ಶಿವಾನಂದ ಹೊಸಳ್ಳಿ, ಷಣ್ಮುಖ ತೋಟಾಕಾವು, ಶಿವು ಹಾಳದೋಟರ, ಮಂಜುನಾಥ ದಿಡ್ಡಿ, ಇತರರಿದ್ದರು.