ಬೆಂಗಳೂರು ಹವಾಮಾನ ವೈಪರೀತ್ಯದಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಸಂಭವಿಸುತ್ತಿವೆ. ಮಳೆಗಾಲದಲ್ಲಿ ಬಿಸಿಲು, ಬೇಸಿಗೆಯಲ್ಲಿ ಮಳೆಯಾಗುತ್ತಿದೆ. ಪರಿಸರ ಸಮತೋಲನವನ್ನು ಕಳೆದುಕೊಂಡಿದೆ. ಈ ನಿಟ್ಟಿನಲ್ಲಿಯೂ ಆವಿಷ್ಕಾರಗಳು ನಡೆಯುವ ಅಗತ್ಯವಿದೆ ಎಂದು ಹೈದರಾಬಾದ್ ಐಐಟಿ ನಿವೃತ್ತ ನಿರ್ದೇಶಕ ಡಾ. ಉದಯ್ ಬಿ. ದೇಸಾಯಿ ತಿಳಿಸಿದರು.
ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಬುಧವಾರ ಆಯೋಜಿಸಿದ್ದ ತನ್ನ 15ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಆವಿಷ್ಕಾರಗಳನ್ನು ಕೈಗೊಳ್ಳುವ ಸಮಯದಲ್ಲಿ ಯೋಜನೆಗಳು ವಿಲವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ತಮ್ಮ ಪ್ರಯತ್ನವನ್ನು ಕೈಬಿಡದೆ, ಎದೆಗುಂದದೆ ಮರಳಿ ಯತ್ನಿಸಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಕಷ್ಟು ಬಾರಿ ಕಿರಿಯರು (ಜೂನಿಯರ್‌ಗಳು) ತಮ್ಮ ಉತ್ತಮ ಆಲೋಚನೆಗಳಿಂದ ಗುಣಮಟ್ಟದ ಆವಿಷ್ಕಾರಗಳನ್ನು ಮಾಡಲು ಮುಂದಾಗುತ್ತಾರೆ. ಇದಕ್ಕೆ ಹಿರಿಯರು (ಸೀನಿಯರ್) ಬೆಂಬಲ ನೀಡುವುದಿಲ್ಲ. ನಿರುತ್ಸಾಹದ ಮಾತುಗಳನ್ನಾಡುತ್ತಾರೆ. ಹೀಗೆ ಮಾಡದೆ, ಸೀನಿಯರ್‌ಗಳು ಪ್ರೋತ್ಸಾಹದಾಯಕ ಮಾತುಗಳನ್ನಾಡಿ ಬೆಂಬಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಘಟಿಕೋತ್ಸವ ನೆನಪಿನಲ್ಲಿ ಇಡುವಂತಹ ದಿನವಾಗಿದೆ. ಪದವಿ ಪಡೆದು ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವ ವಿದ್ಯಾರ್ಥಿಗಳು ಹೊರಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಿರಬೇಕು ಎಂದು ಹೇಳಿದರು.
1,242 ಮಂದಿಗೆ ಪದವಿ ಪ್ರದಾನ:
ಇದೇ ವೇಳೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ 1,242 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇಂಜಿನಿಯರಿಂಗ್, ಬಿ.ಆರ್ಕ್, ಎಂ.ಟೆಕ್, ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಆರ್. ಜಯರಾಂ, ಉಪಾಧ್ಯಕ್ಷ ಎಂ.ಆರ್. ಸೀತಾರಾಂ, ಗೌರವ ಕಾರ್ಯದರ್ಶಿ ಎಂ.ಆರ್. ರಾಮಯ್ಯ ಮತ್ತು ಬಿ.ಎಸ್. ರಾಮಪ್ರಸಾದ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ನಿಜವಾದ ರಾಯಭಾರಿಗಳಾಗಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದುಕೊಡಲಿ. - ಎಂ.ಆರ್. ಜಯರಾಂ, ಅಧ್ಯಕ್ಷ, ಗೋಕುಲ ಶಿಕ್ಷಣ ಪ್ರತಿಷ್ಠಾನ