ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಗಿ ಪ್ರಧಾನ ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯೂ ಹೆಚ್ಚೆಚ್ಚು ವಿಸ್ತೀರ್ಣಗೊಳ್ಳುತ್ತಿರುವ ಕಾಲಘಟ್ಟದಲ್ಲಿ ತೋಟಗಾರಿಕೆ ಬೆಳೆಗಾರರನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ರಿಯಾಯಿತಿ ದರದಲ್ಲಿ ಸಸಿಗಳ ವಿತರಣೆಗೆ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬೆಳೆ ರೈತರ ಆರ್ಥಿಕ ಜೀವನ ಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಈ ಬಗ್ಗೆ ಇಲಾಖೆ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ, ಗುಣಮಟ್ಟದ ಇಳುವರಿ ನೀಡುವ ಉತ್ತಮ ತಳಿಯ ಸಸಿಗಳನ್ನು ವಿತರಿಸಲು ಇಲಾಖೆ ಸಜ್ಜಾಗಿದೆ. ಖಾಸಗಿಯಾಗಿ ಸಸಿಗಳ ದರ ದುಬಾರಿಯಾಗಿರುವ ಹೊತ್ತಿನಲ್ಲಿ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿನ ನರ್ಸರಿಗಳಲ್ಲಿ ಸುಮಾರು 1.40 ಲಕ್ಷ ಸಸಿಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಸಸಿಗಳ ಖರೀದಿಯಲ್ಲಿ ರೈತರಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಇದು ವರದಾನವಾಗಿದೆ.
150ಕ್ಕೂ ಹೆಚ್ಚು ಎಕರೆಯಲ್ಲಿ ನರ್ಸರಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ, ದೊಡ್ಡಬಳ್ಳಾಪುರದ ನಗರೂರು, ನೆಲಮಂಗಲದ ತಿಪ್ಪಗೊಂಡನಹಳ್ಳಿ, ಕೆ ಪೂಜೇನಹಳ್ಳಿ ಸೇರಿ 150ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನರ್ಸರಿ ಮಾಡಲಾಗಿದೆ.ವಿವಿಧ ಜಾತಿಯ ಬೀಜಗಳು, ಕಸಿ ಮಾಡಿದ ಸಸಿಗಳು ಲಭ್ಯವಿದೆ. ಬಹಳಷ್ಟು ಹಂತದಲ್ಲಿ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ. ನರ್ಸರಿಗಳಿಗೆ ಭೇಟಿ ನೀಡುವ ರೈತರಿಗೆ ಅಧಿಕಾರಿಗಳು ಮಾಹಿತಿ ನೀಡಿ ಇಂಥ ಸಸಿಗಳನ್ನು ನೆಡುವಂತೆ ಮಾಹಿತಿ ನೀಡುತ್ತಿದ್ದಾರೆ. ಸಸಿಗಳನ್ನು ಬೆಳೆಸುವ ವಿಧಾನದ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ , ಸಸಿಗಳಿಗೆ ಕಾಡುವ ರೋಗಭಾದೆ ಅವುಗಳ ನಿವಾರಣೆ ಬಗ್ಗೆಯೂ ಮಾಹಿತಿ ಸಿಗುವುದರಿಂದ ಶೇ.95 ಭಾಗ ಸಸಿಗಳು ಯಶಸ್ಸಿಯಾಗಿ ಬೆಳೆಯುತ್ತವೆ.
ಸಸಿಗಳ ದರ ಹೀಗಿವೆ: ತೆಂಗಿನ ಸಸಿ 75ರೂ, ಮಾವು 40ರೂ, ಸಪೋಟೋ 56ರೂ, ಸೀಬೆ 45 ರೂ, ಅಡಕೆ 25ರೂ, ನಿಂಬೆ 29 ರೂ , ನುಗ್ಗೆ 10 ರೂ, ಕರಿಬೇವು 18 ರೂಪಾಯಿಯಂತೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ನರ್ಸರಿಗಳಲ್ಲಿ ಮಾವು, ಸಪೋಟೋ, ಸೀಬೆ, ನೇರಳೆ, ನಿಂಬೆ, ತೆಂಗು, ಪಪ್ಪಾಯ, ಕಾಳು ಮೆಣಸು, ಗೋಡಂಬಿ, ನುಗ್ಗೆ, ಕರಿಬೇವು, ಅಲಂಕಾರಿಕ ಗಿಡಗಳು, ಔಷಧ ಗಿಡಗಳು, ಬಟರ್‌ಪ್ರೋಟ್, ತರಕಾರಿ ಸಸಿಗಳು, ತುಳಸಿ ಸೇರಿ ವಿವಿಧ ಕಸಿ ಸಸಿಗಳನ್ನು ಬೆಳೆಯಲಾಗಿದೆ.
ದೇವನಹಳ್ಳಿ ತಾಲೂಕು ಕನ್ನಮಂಗಲದಲ್ಲಿ 5094 ಮಾವಿನ ಸಸಿ,1194 ಸೀಬೆ ಸಸಿ,4940 ತೆಂಗಿನ ಸಸಿ, 2801 ಪಪ್ಪಾಯ ಸಸಿ, 4387ಅಡಿಕೆ ಸಸಿ, 1211 ನುಗ್ಗೆ , 844 ಕರಿಬೇವು, 32460 ಅಲಂಕಾರಿಕ ಸಸಿಗಳು ಸೇರಿ 37202 ಸಸಿಗಳು ಲಭ್ಯವಿದೆ. ನಗರೂರಿನ ನರ್ಸರಿಯಲ್ಲಿ 5773 ತೆಂಗಿನ ಸಸಿ, 486ನುಗ್ಗೆ, 800ಕರಿಬೇವು, 32460 ಅಲಂಕಾರಿಕ ಸಸಿ ಸೇರಿ 39519 ಸಸಿಗಳು. ದೊಡ್ಡಬಳ್ಳಾಪುರ ನರ್ಸರಿಯಲ್ಲಿ 1400 ತೆಂಗಿನ ಸಸಿಗಳು, 3300ಅಡಿಕೆ ಸಸಿಗಳು ಸೇರಿ 5094 ದೊರೆಯುತ್ತದೆ. ನೆಲಮಂಗಲದ ತಿಪ್ಪಗೊಂಡನಹಳ್ಳಿ ನರ್ಸರಿಯಲ್ಲಿ 5800ಮಾವು, 3233 ಸಪೋಟೋ, 5800ಸೀಬೆ, 33658ನಿಂಬೆ,3302 ತೆಂಗು,11448 ಅಡಿಕೆ, 3799ನುಗ್ಗೆ ಸೇರಿ 41943 ಸಸಿಗಳು ಇರುತ್ತದೆ. ಪೂಜೇನಹಳ್ಳಿ ನರ್ಸರಿಯಲ್ಲಿ 9970 ಅಡಿಕೆ ಸಸಿ, 1842ತೆಂಗು ಸೇರಿದಂತೆ ವಿವಿಧ ಸಸಿಗಳು ಸೇರಿದಂತೆ 16164 ಬೆಂಗಳೂರು ಜಿಲ್ಲೆಯಲ್ಲಿ ಒಟ್ಟಾರೆ 139922 ಸಸಿಗಳು ಲಭ್ಯವಿರುತ್ತದೆ.
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸುವ ಸಲುವಾಗಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ರಿಯಾಯಿತಿ ದರದಲ್ಲಿ ಸಸಿಗಳ ವಿತರಣೆಯೂ ಸೇರಿದೆ. ರೈತರಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಹಾಗೂ ಉತ್ತಮ ಇಳುವರಿ ನೀಡುವ ಗುಣಮಟ್ಟದ ಸಸಿಗಳನ್ನು ವಿತರಿಸಲು ಮುಂದಾಗಿದ್ದೇವೆ. ಸಸಿಗಳ ಬಗ್ಗೆ ಮಾಹಿತಿ ಅವುಗಳನ್ನು ನೆಡುವುದು, ಪೋಷಿಸುವುದು ಕೀಟಬಾಧೆಗಳಿಂದ ರಕ್ಷಣೆ ಸೇರಿ ಹಲವು ಉಪಯುಕ್ತ ಮಾಹಿತಿ ಸಹ ನೀಡಲಾಗುತ್ತಿದೆ.
ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬೆಂಗಳೂರು ಗ್ರಾಮಾಂತರ