ಶಿರಸಿ: ವರದಾ ನದಿಯ ನದಿಯ ನೀರಿನ ಮಟ್ಟ ಹೆಚ್ಚಳ ವಾಗುತ್ತಿದ್ದು ತಾಲೂಕಿನ ಬನವಾಸಿ ಸಮೀಪದ ಅಜ್ಜರಣಿ, ಮುತ್ತುಗುಣಿ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬನವಾಸಿಯಿಂದ ಅಜ್ಜರಣಿ ಹಾಗೂ ಮುತ್ತುಗುಣಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳೇ ಸೇತುವೆಯನ್ನು ತೆರವು ಮಾಡಲಾಗಿದೆ. ಆದರೆ ಹೊಸ ಸೇತುವೆ ಇದುವರೆಗೆ ನಿರ್ಮಾಣವಾಗಿಲ್ಲ ಇದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ.
ಐದು ವರ್ಷ ಕಳೆದರೂ ನಿರ್ಮಾಣವಾಗದ ಸೇತುವೆ: ಸ್ಥಳೀಯರ ಸಮಸ್ಯೆಯನ್ನು ಗಮನಿಸಿದ ಅಂದಿನ ಸರ್ಕಾರ 2018ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಆದೇಶ ನೀಡಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಈ ಸೇತುವೆ ಕಾಮಗಾರಿ ನಡೆಸುವಂತೆ ಸೂಚಿಸಿ, 1.8 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ಕೂಡ ನೀಡಲಾಗಿತ್ತು. ಈ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ್ ಶಿಲನ್ಯಾಸ ನೆರವೇರಿಸಿದ್ದರು. ಆದರೆ ಇಂದಿಗೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ವರದಾ ನದಿ ಉಕ್ಕಿ ಬಂದು ಸೇತುವೆ ಮುಳುಗಿದರೆ, ಅಜ್ಜರಣಿ, ಮತ್ತುಗುಣಿಯ 500 ಕ್ಕೂ ಹೆಚ್ಚು ಕುಟುಂಬಕ್ಕೆ ತೊಂದರೆಯಾಗುತ್ತದೆ. ಅರ್ಧ ಕಿ.ಮೀ ದೂರದ ಬನವಾಸಿ ತಲುಪಲು ನಾಲೈದು ಕಿ.ಮೀ. ಸುತ್ತು ಹಾಕಿ, ಗುಡ್ಡಾಪುರ ಮಾರ್ಗವಾಗಿ ಬರಬೇಕಾಗುತ್ತದೆ.
ಅಜ್ಜರಣಿ, ಮತ್ತುಗುಣಿ ಗ್ರಾಮದ ಸಂಪರ್ಕ ಸೇತುವೆಯನ್ನು ಕಾಮಗಾರಿ ಹೆಸರಿನಲ್ಲಿ ಕೆಡವಿ ಮೂರು ವರ್ಷ ಕಳೆದಿದೆ. ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.> ಮೇಘನಾ ಚನ್ನಯ್ಯ, ವಿದ್ಯಾರ್ಥಿನಿ ಅಜ್ಜರಣಿ ಗ್ರಾಮದ ಸೇತುವೆ ಕಾಮಗಾರಿ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಮೇಲಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಕಾಮಗಾರಿ ಶುರುಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಶ್ರೀಧರ ಮುಂದಲಮನಿ, ತಹಸೀಲ್ದಾರ್ ಶಿರಸಿ