ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯ ಸಿಸಿ ರಸ್ತೆ ಕಾಮಗಾರಿ ಮತ್ತು ಡಿವೈಡರ್ ಕಾಮಗಾರಿ ಕಳಪೆಯಾಗಿದೆ ಎನ್ನುವ ಸಾರ್ವಜನಿಕರ, ಸಂಘಟನೆಗಳ ದೂರಿನ ಹಿನ್ನೆಲೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕರ ಎದುರು ಸಮಸ್ಯೆಬಿಚ್ಚಿಟ್ಟ ಸ್ಥಳೀಯರಾದ ಸದಾನಂದ ನಂದೆಣ್ಣವರ, ರಮೇಶ ಲಮಾಣಿ, ಸಂತೋಷ ರಾಠೋಡ ಅವರು ‘ಈಗಾಗಲೇ ಮುಗಿದಿರುವ ಸಿಸಿ ರಸ್ತೆ ಮತ್ತು ಡಿವೈಡರ್ ಕಾಮಗಾರಿ ಸಹ ಕಳಪೆಯಾಗಿದೆ. ಇಷ್ಟಾಗಿಯೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಸ್ಥಳಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ’ ಎಂದರು.
ಪ್ರತಿಕ್ರಿಯಿಸಿದ ಶಾಸಕರು, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು ಇದರಲ್ಲಿ ಯಾವುದೇ ರಾಜೀ ಇಲ್ಲ, ಟೆಂಡರ್‌ನಲ್ಲಿ ಇರುವಂತೆ ಕಾಮಗಾರಿಯು ನಡೆಯಬೇಕು. ಇಲ್ಲದೆ ಇದ್ದಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸುತ್ತೇನೆ ಎಂದರು. ಅಲ್ಲದೆ, ಇಲ್ಲಿ ನಡೆದಿರುವ ಕಾಮಗಾರಿ ಕಳಪೆ ಎನ್ನುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಸಂಬಂಧಿಸಿದ ಗುತ್ತಿಗೆದಾರರಿಗೆ ಗುಣಮಟ್ಟದಿಂದ ಕಾಮಗಾರಿ ನಡೆಸುವಂತೆ ತಾಕೀತು ಮಾಡಿದರು.
ಪ್ರಕಾಶ ಕೊಂಚಿಗೇರಿಮಠ, ಕುಮಾರ ಬೆಟಗೇರಿ, ಗಣೇಶ ಮೆಹರವಾಡೆ, ಶಂಕರಗೌಡ ಪಾಟೀಲ ಇದ್ದರು.