ಜಿಲ್ಲೆ

ಕಾನೂನು ಉಲ್ಲಂಘಿಸಿದರೆ ಶಿಸ್ತುಕ್ರಮ

ಸೋಮನಾಥ ರೆಡ್ಡಿ

ಲಕ್ಷ್ಮೇಶ್ವರ: ಹಬ್ಬಗಳ ಆಚರಣೆಯ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆ ಮತ್ತು ಸಮಾಜದ ಶಾಂತಿ-ಸೌಹಾರ್ಧತೆ ಕದಡುವ ಘಟನೆಗಳು, ಕಾನೂನು ಉಲ್ಲಂಘಟನೆಯಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಹೇಳಿದರು.

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮಂತ್ರ ಮೊಳಗಿದ ನೆಲದಲ್ಲಿ ಪರಸ್ಪರ ಸ್ನೇಹ, ಸೌಹಾರ್ಧತೆ, ಸಹೋದರತ್ವದಿಂದ ಬದುಕಬೇಕು. ಗಣೇಶ ಪ್ರತಿಷ್ಠಾಪನೆ ಮಂಡಳಿಗಳು ತಹಸೀಲ್ದಾರ್, ಪುರಸಭೆ, ಪೊಲೀಸ್ ಮತ್ತು ಹೆಸ್ಕಾಂನಿಂದ ಪೂರ್ವಾನುಮತಿ ಪಡೆಯಬೇಕು. ಹಬ್ಬ ಆಚರಣೆ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ, ಪೋಸ್ಟ್ ಹಾಕುವುದು ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವಂತೆ ವರ್ತಿಸಬಾರದು ಎಂದರು.

ತಹಸೀಲ್ದಾರ್ ಕೆ.ಆನಂದಶೀಲ ಮಾತನಾಡಿ, ಹಬ್ಬ ಹರಿದಿನಗಳ ಆಚರಣೆಯ ನೆಪದಲ್ಲಿ ಯಾವುದಕ್ಕೂ ಅಪಚಾರವಾಗದಂತೆ ಹಬ್ಬಗಳ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಶಿಸ್ತು, ಸಂಯಮ ಮತ್ತು ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸೋಣ ಎಂದರು.

ಡಿವೈಎಸ್‌ಪಿ ಎಂ.ಬಿ. ಸಂಕದ ಮಾತನಾಡಿದರು.

ಸುರೇಶ ನಂದೆಣ್ಣವರ ಮಾತನಾಡಿ ಪಟ್ಟಣದಲ್ಲಿರುವ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನಿಧಾನಗತಿ ಕಾಮಗಾರಿಯಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಗಳ ತಗ್ಗು ಗುಂಡಿಗಳನ್ನು ಮುಚ್ಚಿಸಬೇಕು ಮತ್ತು ಕಾಮಗಾರಿ ಪೂರ್ಣಗೊಳಿಸುವ ಮೂಲಕ ಹಬ್ಬದ ಆಚರಣೆಗೆ ಅನಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಚಂಬಣ್ಣ ಬಾಳಿಕಾಯಿ, ಜಯಕ್ಕ ಕಳ್ಳಿ, ಪಿ.ಬಿ. ಖರಾಟೆ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.

ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ ಗದಗ ಈದ್-ಮಿಲಾದ್ ಹಬ್ಬವನ್ನು ಎಲ್ಲರೊಂದಿಗೆ ಸೇರಿ ಸೌಹಾರ್ಧತೆಯಿಂದ ಆಚರಿಸುತ್ತೇವೆ ಮತ್ತು ಹಬ್ಬದ ಆಚರಣೆ ವೇಳೆ ಡಿಜೆ ಬಳಸದಂತೆ ಸ್ವಯಂ ಪ್ರೇರಿತ ನಿರ್ಧಾರ ಮಾಡಿದ್ದೇವೆ ಎಂದರು.

ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಯೂಸುಫ್ ಜಮೂಲಾ ನಿರ್ವಹಿಸಿದರು. ಸೋಮಣ್ಣ ಬೆಟಗೇರಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಮಂಜುನಾಥ ಮುದಗಲ್, ಶೇಖಣ್ಣ ಕಾಳೆ, ಅಮರೇಶ ತೆಂಬದಮನಿ, ಬಸವರಾಜ ಹೊಗೆಸೊಪ್ಪಿನ ಇತರರು ಇದ್ದರು.