ಹಾವೇರಿ: ಜಿಲ್ಲೆಯ ಎಲ್ಲ ಗ್ರಾಮಗಳ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಸಕ್ರಿಯಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಸೂಚನೆ ನೀಡಿದ್ದಾರೆ. ಶುದ್ಧ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ, ಸಾರ್ವಜನಿಕರಿಗೆ ಶುದ್ಧ ಮತ್ತು ಅಗತ್ಯ ಪ್ರಮಾಣದ ನೀರು ಸರಬರಾಜು ಮಾಡುವುದು, ಕುಡಿಯುವ ನೀರಿನ ಮೂಲಗಳನ್ನು ಸುಸ್ಥಿತಿಯಲ್ಲಿಡುವುದು, ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು ಗ್ರಾಮ ಪಂಚಾಯಿತಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಮುಖ್ಯ ಉದ್ದೇಶವಾಗಿದೆ.
ಸಮಿತಿಗಳು ಗ್ರಾಮಗಳಲ್ಲಿ ಶೌಚಗೃಹಗಳು, ನೀರು ನಿಲ್ಲುವ ಪ್ರದೇಶಗಳು, ಖಾಲಿ ನಿವೇಶನಗಳ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ತ್ಯಾಜ್ಯವನ್ನು ರಸ್ತೆಬದಿ, ಎಲ್ಲೆಂದರಲ್ಲಿ ಎಸೆಯದೆ ವೈಜ್ಞಾನಿಕವಾಗಿ ಹಸಿ, ಒಣ ಕಸವನ್ನಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕು.
ಸಮಿತಿಯ ಕಾರ್ಯಾನುಷ್ಠಾನದ ಕುರಿತು ಸೂಕ್ತ ಮೇಲ್ವಿಚಾರಣೆಯನ್ನು ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹಾಗೂ ತಾಪಂ ಇಒ ನಿರಂತರವಾಗಿ ಕೈಗೊಂಡು ವರದಿ ಸಲ್ಲಿಸಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ಅಥವಾ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿ ಹಾಗೂ ನೌಕರರನ್ನು ನೇರ ಹೊಣೆಗಾರರನ್ನಾಗಿಸಿ ಅಂಥವರ ವಿರುದ್ಧ ಕಟ್ಟುನಿಟ್ಟನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿನ ನೀರಿನ ಟ್ಯಾಂಕ್ಗಳನ್ನು ಶುಚಿಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಬೇಕು. ಪ್ರತಿಯೊಂದು ಕುಡಿಯುವ ನೀರಿನ ಮೂಲಗಳಿಂದ ಕಡ್ಡಾಯವಾಗಿ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿಸಬೇಕು ಎಂದು ಸಿಇಒ ತಿಳಿಸಿದ್ದಾರೆ.
ಗ್ರಾಮಗಳಲ್ಲಿ್ಲ ಒಂದು ವೇಳೆ, ಕಲುಷಿತ ನೀರು ಪೂರೈಕೆಯಾದರೆ, ಅಂತಹ ನೀರು ಸೇವಿಸಿ ಜನ ಅಸ್ವಸ್ಥರಾಗಿರುವ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಸಿಇಒ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಹಲವು ಸಮಿತಿಗಳು ತನ್ನ ಜವಾಬ್ದಾರಿಗಳನ್ನು ನಿರ್ವಹಿಸದಿರುವುದು ಕಂಡುಬಂದಿದೆ. ಇದರಿಂದ ಕೆಲ ಗ್ರಾಮಗಳಲ್ಲಿ ಬೋರ್ವೆಲ್ ಮೂಲಗಳಿಂದ ಬ್ಯಾಕ್ಟೀರಿಯಾ ಅಂಶವುಳ್ಳ ನೀರು ಸೇವಿಸಿ ಹಲವು ಜನ ಭೇದಿಯಿಂದ ಅಸ್ವಸ್ಥರಾಗಿರುವ ಪ್ರಕರಣಗಳು ಕಂಡುಬಂದಿವೆ. ಕಾರಣ ಪಂಚಾಯಿತಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಕೂಡಲೇ ಸಕ್ರಿಯಗೊಂಡು ತನ್ನ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಅಕ್ಷಯ ಶ್ರೀಧರ ತಿಳಿಸಿದ್ದಾರೆ.